ಲೌಕಿಕದಲ್ಲಿ ದುಃಖ, ಆಧ್ಯಾತ್ಮದಲ್ಲಿ ಸುಖ

ಬೀದರ್: ಫೆ.16:ಲೌಕಿಕದಲ್ಲಿ ದುಃಖವಿದ್ದರೆ, ಆಧ್ಯಾತ್ಮದಲ್ಲಿ ಸುಖವಿದೆ ಎಂದು ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ಡಾ. ಶಿವಕುಮಾರ ಸ್ವಾಮೀಜಿ ಅವರ 80ನೇ ಜಯಂತಿ ಮಹೋತ್ಸವದ ಎರಡನೇ ದಿನವಾದ ಗುರುವಾರ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೌಖಿಕ ಸಂಗತಿಗಳು ದುಃಖ ಉಂಟು ಮಾಡುತ್ತವೆ. ಆದರೆ, ದೇವರ ನಾಮಸ್ಮರಣೆ, ಧ್ಯಾನ, ಪೂಜೆಯಂತಹ ಆಧ್ಯಾತ್ಮಿಕ ಸಂಗತಿಗಳು ಪರಮಾನಂದ ನೀಡುತ್ತವೆ ಎಂದು ತಿಳಿಸಿದರು.
ಆಕಾಶದ ಪ್ರತಿ ಹನಿಗೂ ಸಮುದ್ರವನ್ನೇ ತಲುಪುವ ಗುರಿ ಇರುತ್ತದೆ. ಹಾಗೆಯೇ ಸರಿಯಾದ ವಿಧಾನದಲ್ಲಿ ನಡೆದಲ್ಲಿ ಜೀವನ ಸಾರ್ಥಕ ಆಗುತ್ತದೆ ಎಂದು ತಿಳಿಸಿದರು.
ಅತ್ತಲಿತ್ತ ಸುಳಿಯುವ ಮನಸ್ಸನ್ನು ನಿಗ್ರಹಿಸಿ ಭಗವಂತನ ಕಡೆ ಕೇಂದ್ರೀಕರಿಸಿದರೆ ಅದೇ ಮೋಕ್ಷ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಇಂದ್ರೀಯಗಳ ಇಚ್ಛೆಯಂತೆ ನಡೆದರೆ ದುಃಖ ತಪ್ಪಿದ್ದಲ್ಲ. ಬುದ್ಧಿಯ ಇಚ್ಛೆಯಂತೆ ನಡೆದರೆ ಸುಖವಿದೆ ಎಂದು ತಿಳಿಸಿದರು.
ಶಿವಕುಮಾರ ಸ್ವಾಮೀಜಿ 80 ವರ್ಷಗಳ ಅವಧಿಯಲ್ಲಿ ಅಪಾರ ಶಿಷ್ಯ ಬಳಗ ಸೃಷ್ಟಿಸಿ, ನಾಡಿನಾದ್ಯಂತ ಸಿದ್ಧಾರೂಢ ಮಠಗಳನ್ನು ಕಟ್ಟಿಸಿದ್ದಾರೆ. ಅವರು ಭವಿಯೆಂಬುದ್ದನ್ನು ಕಳೆದು ಭಕ್ತನೆಂದೆನಿಸಿದ ಮಹಾ ಸಂತರು ಎಂದು ಬಣ್ಣಿಸಿದರು.
ಕನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಶರೀರವೆಂಬುದು ಭೂಮಿ ಇದ್ದಂತೆ. ಹಸನಾಗಿಟ್ಟರೆ ಮಾತ್ರ ಬೆಳೆ ಚೆನ್ನಾಗಿ ಬರುತ್ತದೆ. ಶರೀರವೆಂಬ ಪಟಕ್ಕೆ ಪರಮಾತ್ಮ ಆಯುಷ್ಯವೆಂಬ ದಾರ ಕಟ್ಟಿದ್ದಾನೆ. ದಾರ ಗಟ್ಟಿಯಿರುವವರೆಗೆ ಪಟ ಹಾರಾಡುತ್ತದೆ. ಸೂತ್ರಧಾರ ನಿಮ್ಮ ಕೈಯಲ್ಲಿರಲಿ. ಸಡಿಲಬಿಟ್ಟರೆ ಪಟ ನೆಲಕ್ಕೆ ಬೀಳುತ್ತದೆ. ಹೀಗಾಗಿ ಶರೀರವೆಂಬ ರಥ ನಡೆಸುವವನು ಸಮರ್ಥನಿರಬೇಕು ಎಂದು ಹೇಳಿದರು.
ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, ಈ ದೇಶವೂ ನಮ್ಮದಲ್ಲ. ಈ ವೇಷವೂ ನಮ್ಮದಲ್ಲ. ಹಾಗಾದರೆ, ಬಂದಿದ್ದಾದರೂ ಏತಕ್ಕೆ? ಹಿಂದೆ ಮಾಡಿದ ಪುಣ್ಯ- ಪಾಪ ಭೋಗಿಸಲು ಎಂದು ಹೇಳಿದರು.
ಎಲ್ಲಿಂದ ಬಂದಿದ್ದೇವೆ ಪುನಃ ಅಲ್ಲಿಗೆ ತಲುಪಲು ಈ ಶರೀರ ವಾಹನವಾಗಿದೆ. ಇದನ್ನು ಸರಿ ಇಟ್ಟುಕೊಂಡು ಗುರಿ ತಲುಪಬೇಕು ಎಂದು ಹೇಳಿದರು.
ಗದಗಿನ ಮಾತೆ ಅಕ್ಕಮಹಾದೇವಿ, ಕಾಶಿಯ ಸೋಹಂಚೈತನ್ಯ ಮಹಾರಾಜ, ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ. ಉಮಾ ದೇಶಮುಖ, ಪರಿಶುದ್ಧಾನಂದಗಿರಿ ಮಹಾರಾಜ, ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮೀಜಿ, ಬೆಂಗಳೂರಿನ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿದರು.
ಡಾ. ಶಿವಕುಮಾರ ಸ್ವಾಮೀಜಿ ರಚಿತ ‘ಭಜಗೋವಿಂದಂ’, ‘ಶತರಥಾ ಕುಸುಮಾಂಜಲಿ’ ಹಾಗೂ ‘ಆರೂಢ ಗ್ರಂಥ ಭಜನಮಾಲಾ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟದ್ದೆವರು, ಕಲಬುರಗಿಯ ಮಾತೆ ಲಕ್ಷ್ಮೀದೇವಿ, ಪ್ರಣವಾನಂದ ಸ್ವಾಮೀಜಿ, ಆಲಮಟ್ಟಿಯ ರುದ್ರಮುನಿ ಸ್ವಾಮೀಜಿ, ಶಿವರಾಮಕೃಷ್ಣಾನಂದ ಸ್ವಾಮೀಜಿ, ಜ್ಞಾನಾನಂದ ಸ್ವಾಮೀಜಿ, ಬಸಯ್ಯ ಸ್ವಾಮೀಜಿ, ಅರಿಕೇರೆ ಮಾಧವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಪ್ರಮುಖರಾದ ಬಿ.ಜಿ. ಶೆಟಕಾರ್, ಬಸವರಾಜ ಜಾಬಶೆಟ್ಟಿ, ಗುರುನಾಥ ಕೊಳ್ಳುರ, ಉದಯಭಾನು ಹಲವಾಯಿ, ಭಾರತಿಬಾಯಿ ಕಣಜಿ, ಕಲ್ಯಾಣರಾವ್ ಬುಯರಕೆ, ಶಿವಶರಣಪ್ಪ ವಾಲಿ, ವಿರೂಪಾಕ್ಷ ಗಾದಗಿ, ಸದಾನಂದ ಜೋಶಿ, ರೇವಣಸಿದ್ದಪ್ಪ ಜಲಾದೆ, ಸಹಜಾನಂದ ಕಂದಗೂಳ್, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಮೊದಲಾದವರು ಇದ್ದರು.