ಲೋಕ ಸಮರ ಕೈ ಗೆಲುವು ಖಚಿತ

ಕಲಬುರಗಿ,ಡಿ.೩: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗಮನಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಧಿಕಾರ ಹಿಡಿಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಏನೂ ಅಲ್ಲ ಎನ್ನುವ ಪ್ರಧಾನಿ ಮೋದಿ ಹಾಗೂ ಬಿಜೆಪಿಯವರ ವಾದಕ್ಕೆ ಪಂಚರಾಜ್ಯಗಳ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ ಎಂದರು.
ದೇಶಾದ್ಯಂತ ಕಾಂಗ್ರೆಸ್ ಮತ್ತೆ ತಲೆ ಎತ್ತುತ್ತಿದೆ ಅನ್ನೋದು ಫಲಿತಾಂಶದಿಂದ ಗೊತ್ತಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಗೆಲ್ಲಬೇಕಿತ್ತು. ನಮ್ಮ ನಿರೀಕ್ಷೆಯೂ ಇತ್ತು ಎಂದು ಮುತ್ಸದ್ಧಿ ಮೊಯ್ಲಿ ನುಡಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿಯವರು ಸಾಕಷ್ಟು ಬಿಂಬಿಸಿದ್ದರು. ಈಗ ನೋಡಿದರೆ ಆಅಲ ರಾಜ್ಯದಲ್ಲಿ ಅಗ್ರಗಣ್ಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಬಿ.ಆರ್.ಎಸ್ ಮುಖಂಡ ಚಂದ್ರಶೇಖರ್ ರಾವ್ ಕಾಂಗ್ರೆಸ್ ಕೃಪಾಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದರು. ಅಧಿಕಾರಕ್ಕೆ ಬಂದ ಮೇಲೆ ಅದೇ ಕಾಂಗ್ರೆಸ್ ಪಕ್ಷವನ್ನ ತುಳಿದಿದ್ದರು. ಈಗ ತೆಲಂಗಾಣ ಜನರು ಅವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಚಂದ್ರಶೇಖರರಾವ್ ಸ್ಥಿತಿಯನ್ನು ಲೇವಡಿ ಮಾಡಿದರು.
ಇನ್ನು ತೆಲಂಗಾಣದಲ್ಲಿ ಗೆಲುವಿಗೆ ಅಲ್ಲಿನ ಒಗ್ಗಟ್ಟು ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಿದ ಅವರು, ರಾಹುಲ್ ಗಾಂಧಿ ಅವರ ವರ್ಚಸ್ಸು ಗೆಲುವಿಗೆ ಕಾರಣ ಎಂದರು.
ತೆಲಂಗಾಣದಲ್ಲಿ ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ಪ್ರಬಾವ ಬೀರಿದೆ ಎಂದರಲ್ಲದೆ, ನಾವು ನುಡಿದಂತೆ ನಡೆದಿದ್ದೇವೆ. ಇದೇ ಅಂಶ ತೆಲಂಗಾಣದಲ್ಲಿ ನಮ್ಮ ಕೈ ಹಿಡಿದಿದೆ ಎಂದರು.