ಲೋಕ ಸಮರ:ಬಿಜೆಪಿಯಿಂದ 195 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, 34 ಸಚಿವರಿಗೆ ಮಣೆ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಲು ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ನಿರೀಕ್ಷೆಯಂತೆ ಬಿಜೆಪಿಯ 195 ಅಭ್ಯರ್ಥಿ ಮೊದಲ ಪಟ್ಟಿ ಪ್ರಕಟವಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ. 34 ಮಂದಿ ಕೇಂದ್ರ ಸಚಿವರಿಗೆ ಮೊದಲ ಪಟ್ಟಿಯಲ್ಲಿ ಮಣೆ ಹಾಕಲಾಗಿದೆ.
ಮೊದಲ ಪಟ್ಟಿಯಲ್ಲಿ 28 ಮಹಿಳಾ ಅಭ್ಯರ್ಥಿಗಳು, 47 ಯುವಕರು, ಪರಿಶಿಷ್ಟ ಜಾತಿಯಿಂದ 27, ಪರಿಶಿಷ್ಟ ಪಂಗಡದಿಂದ 18 ಮತ್ತು 57 ಒಬಿಸಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಗುರುವಾರ ತಡರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸುದೀರ್ಘ ಸಭೆ ನಡೆಸಿ ಮೊದಲ ಪಟ್ಟಿಯನ್ನು ಅಖೈರುಗೊಳಿಸಿತ್ತು. ಇದರ ಬೆನ್ನಲ್ಲೇ ಇಂಡಿಯಾ ಮೈತ್ರಿಕೊಟಕ್ಕಿಂತ ಬಿಜೆಪಿಯ ಮೊದಲ ಪಟ್ಟಿ ಪ್ರಕಟವಾಗಿದೆ.
ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿದ್ದಾರೆ. ಇನ್ನು ಗಾಂಧಿನಗರದಿಂದ ಅಮಿತ್ ಶಾ, ಲಖನೌದಿಂದ ರಾಜನಾಥ್ ಸಿಂಗ್ ಅಖಾಡಕ್ಕಿಳಿಯಲಿದ್ದಾರೆ. ಅಮೇಥಿಯಿಂದ ಸ್ಮೃತಿ ಇರಾನಿ, ಕೋಟಾದಿಂದ ಓಂ ಬಿರ್ಲಾ ಹಾಗೂ ಈ ಬಾರಿ ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಗೆ ಟಿಕೆಟ್ ನೀಡಲಾಗಿದ್ದು ನವದೆಹಲಿಯಿಂದ ಅಖಾಡಕ್ಕೆ ಧುಮುಕುತ್ತಿದ್ದಾರೆ.
ಉತ್ತರ ಪ್ರದೇಶ 51, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15, ಕೇರಳದ 12, ತೆಲಂಗಾಣದ 9, ಅಸ್ಸಾಂನ 11, ಜಾರ್ಖಂಡ್ ಮತ್ತು ಛತ್ತೀಸ್‌ಗಢದಿಂದ ತಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ದೆಹಲಿಯ 5, ಜಮ್ಮು ಮತ್ತು ಕಾಶ್ಮೀರದಿಂದ 2, ಉತ್ತರಾಖಂಡದಿಂದ 3, ಅರುಣಾಚಲ ಪ್ರದೇಶದಿಂದ 2 ಮತ್ತು ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಮತ್ತು ದಿಯುನಿಂದ ತಲಾ 1 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.