ಲೋಕ ಚುನಾವಣೆ: ಜ.4 ಸಿದ್ದು, ಡಿಕೆಶಿ ದೆಹಲಿಗೆ

ಬೆಂಗಳೂರು, ಜ. ೧- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ ೨೦ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷ, ಚುನಾವಣಾ ಸಿದ್ಧತೆ, ರಣತಂತ್ರಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಈ ತಿಂಗಳ ೪ ರಂದು ದೆಹಲಿಗೆ ಹೈಕಮಾಂಡ್ ಬುಲಾವ್ ನೀಡಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಯಾವೆಲ್ಲಾ ರಣತಂತ್ರಗಳನ್ನು ರೂಪಿಸಬೇಕು, ಯಾವ ಯಾವ ಕ್ಷೇತ್ರಗಳಿಗೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬೆಲ್ಲಾ ಬಗ್ಗೆ ಚರ್ಚೆ ನಡೆಸಲು ವರಿಷ್ಠರು ಈ ತಿಂಗಳ ೪ ರಂದು ದೆಹಲಿಯಲ್ಲಿ ಉನ್ನತ ನಾಯಕರ ಸಭೆ ನಡೆಸಲಿದ್ದು, ಈ ಸಭೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಆಹ್ವಾನ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರುಗಳು ಭಾಗಿಯಾಗುವರು.
ಮುಂದಿನ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೂ ತಮ್ಮ ವ್ಯಾಪ್ತಿಯ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕೆಪಿಸಿಸಿ ಈಗಾಗಲೇ ಸಚಿವರುಗಳಿಗೆ ಸೂಚನೆ ನೀಡಿದ್ದರು, ಅದರಂತೆ ೨-೩ ದಿನಗಳಲ್ಲಿ ಎಲ್ಲ ಸಚಿವರುಗಳು ಅಭ್ಯರ್ಥಿಗಳ ಆಯ್ಕೆ ಬಗ್ಗೆ ವರದಿಯನ್ನು ಕೆಪಿಸಿಸಿಗೆ ಸಲ್ಲಿಸುವರು.
ಈ ವರದಿಯೊಂದಿಗೆ ತೆರಳುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸುವರು. ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ೧೦ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇನ್ನುಳಿದ ೧೮ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗಳ ತಲಾಶ್ ನಡೆದಿದೆ.
ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಸಚಿವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಆದರೆ ಕೆಲ ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ವರಿಷ್ಠರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೧೦ ಸಚಿವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಸಚಿವರುಗಳಾದ ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ, ಡಾ. ಮಹದೇವಪ್ಪ, ಕೆ.ಹೆಚ್. ಮುನಿಯಪ್ಪ ಇವರುಗಳನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಗಳಾಗಿ ಈ ಸಚಿವರುಗಳಲ್ಲಿ ಕೆಲವರು ಸ್ಪರ್ಧಿಸಲು ಹಿಂದೇಟು ಹಾಕಿದ್ದು ತಮ್ಮ ಪುತ್ರ ಇಲ್ಲವೆ ಪುತ್ರಿಯರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡುವ ಬರವ ಜವಾಬ್ದಾರಿ ನಮ್ಮದು ಎನ್ನಲಾಗಿದೆ.
ಈ ಬಗ್ಗೆ ವರಿಷ್ಠರ ಜತೆ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಚರ್ಚೆ ನಡೆಸುವರು ಎನ್ನಲಾಗಿದೆ.
ದೆಹಲಿಯಲ್ಲಿ ನಡೆಯುವ ಸಭೆಯ ನಂತರ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಈ ತಿಂಗಳ ಅಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.