ಲೋಕ ಚುನಾವಣೆ ಗೆಲುವಿಗೆ ರಣತಂತ್ರ ರೂಪಿಸುವತ್ತ ರಾಜಕೀಯ ಪಕ್ಷಗಳ ಚಿತ್ತ

ಬೆಂಗಳೂರು, ಮಾ. ೧೭- ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸಾಗಿದ್ದು, ಗೆಲುವಿಗೆ ರಣತಂತ್ರಗಳನ್ನು ರೂಪಿಸುವತ್ತ ರಾಜಕೀಯ ಪಕ್ಷಗಳು ಮಗ್ನವಾಗಿವೆ.
ಮತದಾರರನ್ನು ಓಲೈಸಲು ಏನೆಲ್ಲಮಾಡಬೇಕು, ಯಾವೆಲ್ಲಾ ಭರವಸೆಗಳನ್ನು ನೀಡಬೇಕು, ಪ್ರಚಾರ ಯಾವ ರೀತಿ ಇರಬೇಕು ಎಂಬೆಲ್ಲಾ ಬಗ್ಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮೂರು ರಾಜಕೀಯ ಪಕ್ಷಗಳಲ್ಲಿ ಮುಖಂಡರ, ಕಾರ್ಯಕರ್ತರ ಸರಣಿ ಸಭೆಗಳು ನಡೆದಿವೆ.
ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ ೨೬ ಮತ್ತು ಮೇ ೭ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಜತೆಗೆ ಅಬ್ಬರದಪ್ರಚಾರದತ್ತ ರಾಜಕೀಯ ಪಕ್ಷಗಳು ಚಿತ್ತ ಹರಿಸಿದ್ದು, ಲೋಕಸಭಾ ಚುನಾವಣೆಗ ಅಖಾಡ ರಂಗೇರಿದೆ.
ಈ ಲೋಕಸಭಾ ಚುನಾವಣೆಗೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಹಲವು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಬಾಕಿ ಉಳಿದಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆದಿದೆ. ೨-೩ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಎಲ್ಲ ಕ್ಷೇತ್ರಗಳಿಗೂ ತಮ್ಮ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿವೆ.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ ಬಿಜೆಪಿ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಿನ್ನೆ ದೆಹಲಿಯಲ್ಲಿ ಅಮಿತ್ ಶಾ ರವರನ್ನು ಭೇಟಿ ಮಾಡಿ ಚುನಾವಣಾ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಿದರು. ಮಾ. ೨೫ರ ನಂತರ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಹತ್ತು ಗ್ಯಾರಂಟಿಗಳ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿ ಸಹ ತನ್ನದೇ ಆದ ಪ್ರಣಾಳಿಕೆಯನ್ನು ರೂಪಿಸುವತ್ತ ಗಮನ ಹರಿಸಿದೆ. ಮತದಾರರನ್ನು ಓಲೈಸಲು ಜನಪರ ಕಾರ್ಯಕ್ರಮಗಳ ಜಾರಿಯ ಭರವಸೆಗಳನ್ನು ಒಳಗೊಂಡ ತನ್ನದೇ ಆದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲು ಬಿಜೆಪಿಯಲ್ಲಿ ತಯಾರಿ ನಡೆದಿದೆ.
ಅಬ್ಬರದ ಪ್ರಚಾರ-ಸಮಾವೇಶ
ಲೋಕಸಭಾ ಚುನಾವಣೆಗೆ ಅಬ್ಬರದ ಪ್ರಚಾರ ನಡೆಸಲು ಮೂರು ಪಕ್ಷಗಳು ನಿರ್ಧರಿಸಿದ್ದು, ಪ್ರತಿ ಕ್ಷೇತ್ರಗಳಲ್ಲೂ ಸಾರ್ವಜನಿಕರ ಸಭೆ, ಸಮಾವೇಶಗಳನ್ನು ಆಯೋಜಿಸಲು ಮುಂದಾಗಿವೆ.ಬಿಜೆಪಿಯ ಪ್ರಚಾರಕ್ಕೆ ನಿನ್ನೆಯೇ ಕಲಬುರಗಿಯಲ್ಲಿ ಪ್ರಧಾನಿ ಮೋದಿ ಅವರು ಚಾಲನೆನೀಡಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ನಾಳೆ ಶಿವಮೊಗ್ಗದಲ್ಲೂ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗುವರು.
ಕಾಂಗ್ರೆಸ್ ಸಹ ಈಗಾಗಲೇ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ಒಂದು ಸುತ್ತಿನ ಪ್ರಚಾರ ಮುಗಿಸಿದ್ದು,ಚುನಾವಣಾ ಸಂದರ್ಭದಲ್ಲಿ ಪ್ರತಿ ಕ್ಷೇತ್ರದಲ್ಲೂ ಬೃಹತ್ ರ್‍ಯಾಲಿ ಸಮಾವೇಶಗಳನ್ನು ನಡೆಸುವತ್ತ ಚಿತ್ತ ಹರಿಸಿದೆ.
ಘಟಾನುಘಟಿಗಳ ಪ್ರಚಾರ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಘಟಾನುಘಟಿಗಳ ಪ್ರಚಾರಕ್ಕೆ ಮುಂದಾಗಿದ್ದು, ಬಿಜೆಪಿ ಪರವಾಗಿ ಪ್ರಧಾನಿ ಮೋದಿ ಕೇಂದ್ರ ಗೃಹಸಚಿವಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಕೇಂದ್ರದ ಹಲವು ನಾಯಕರು ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಸಹ ರಾಜ್ಯದಲ್ಲಿ ತನ್ನ ಕೇಂದ್ರ ನಾಯಕರನ್ನು ಪ್ರಚಾರಕ್ಕೆ ಕರೆಸಲು ನಿರ್ಧರಿಸಿದ್ದು, ಕಾಂಗ್ರೆಸ್ ಪರವಾಗಿ ರಾಹುಲ್‌ಗಾಂಧಿ, ಪ್ರಿಯಾಂಕವಾಧ್ರಾ ಸೇರಿದಂತೆ ಹಲವು ಕೇಂದ್ರ ನಾಯಕರು ರಾಜ್ಯದಲ್ಲಿ ಪ್ರಚಾರ ನಡೆಸುವರು. ಜೆಡಿಎಸ್ ಸಹ ತನ್ನದೇ ಆದ ರೀತಿಯಲ್ಲಿ ತನ್ನ ಅಭ್ಯರ್ಥಿಗಳು ಸ್ಪರ್ಧಿಸುವ ಮೂರು ಕ್ಷೇತ್ರಗಳಲ್ಲೂ ಪ್ರಚಾರಕ್ಕೆ ತಯಾರಿ ನಡೆಸಿದ್ದು,
ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್ ಅಭ್ಯರ್ಥಿಪರ ಪ್ರಚಾರ ನಡೆಸಲಿದ್ದಾರೆ.