ಲೋಕ ಚುನಾವಣೆ ಎನ್ ಡಿಎಗೆ ಹ್ಯಾಟ್ರಿಕ್ ಜಯಭೇರಿ : ಮೋದಿ ವಿಶ್ವಾಸ, ಕೈ ವಿರುದ್ಧ ವಾಗ್ದಾಳಿ

ನವದೆಹಲಿ, ಫೆ.5- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ, ಬಿಜೆಪಿ 370 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದಾಗಿ ಹೇಳಿದರು.
ಕಾಂಗ್ರೆಸ್ ಹಾಗೂ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ಚುನಾವಣೆ ಎದುರಿಸುವ ಧೈರ್ಯವನ್ನೇ ವಿಪಕ್ಷಗಳು ಕಳೆದುಕೊಂಡಿದ್ದು, ವಿಪಕ್ಷಗಳ ಕುರ್ಚಿಯಲ್ಲಿ ಬಹುಕಾಲ ಕುಳಿತುಕೊಳ್ಳಲು ಸಂಕಲ್ಪ ಮಾಡಿವೆ ಎಂದು ವ್ಯಂಗ್ಯವಾಡಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಲೋಕಸಭೆಯಲ್ಲಿಂದು ಮಾತನಾಡಿದ ಪ್ರಧಾನಿ, ದೇಶದ ಮನಸ್ಥಿತಿಯನ್ನು ಗಮನಿಸಿದ್ದ್ದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ ನೇತೃತ್ವದ ಬಿಜೆಪಿ ಹ್ಯಾಟ್ರಿಕ್ ವಿಜಯ ಸಾಧಿದಲಿದೆ ಎಂದರು.
ಮೋದಿಯವರು ಭಾಷಣ ಮಾಡುವಾಗ ಅಬ್ ಕಿ ಬಾರ್ (ಈ ಬಾರಿಯೂ) ಎಂಬ ಮಾತನ್ನು ಹೇಳಿದಾಗ ಸದನದಲ್ಲಿ ಬಿಜೆಪಿ ಸದಸ್ಯರು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯ ಸಾಧಿಸುವುದಾಗಿ ಹೇಳಿದಾಗ ಮೇಜುಕುಟ್ಟಿ ಸಂಭ್ರಮಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮೋದಿ, ಒಂದೇ ಉತ್ಪನ್ನವನ್ನು ಪದೇ ಪದೇ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದಾಗಿ ಕಾಂಗ್ರೆಸ್ ತನ್ನ ಅಂಗಡಿಯನ್ನು ಶೀಘ್ರ ಬಂದ್ ಮಾಡಬೇಕಾಗುತ್ತದೆ ಎಂದು ಕಟಕಿಯಾಡಿದರು.
ವಂಶಪಾರಂಪರ್ಯ ರಾಜಕಾರಣದ ವಿರುದ್ಧವೂ ಗುಡುಗಿದ ಮೋದಿ, ಉತ್ತಮ ವಿಪಕ್ಷವಾಗಿ ತನ್ನ ಜವಾಬ್ದಾರಿ ನಿರ್ವಹಿಸಲು ಕಾಂಗ್ರೆಸ್ ಗೆ ಉತ್ತಮ ಅವಕಾಶವಿತ್ತು.‌ಆದರೆ ತನ್ನ ಪಾತ್ರವನ್ನು ನಿಭಾಯಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ವಿರೋಧ ಪಕ್ಷದ ಕೆಲ ನಾಯಕರು ತಮ್ಮ ಲೋಕಸಭಾ ಕ್ಷೇತ್ರಗಳನ್ನು ಬದಲಾಯಿಸಲು ಮುಂದಾಗಿದ್ದಾರೆ ಇನ್ನೂ ಕೆಲವರು ರಾಜ್ಯಸಭೆಗೆ ಹೋಗಲು ಯೋಚಿಸುತ್ತಿದ್ದಾರೆ ಎಂದರು.
ಇಂಡಿಯಾ ಮೈತ್ರಿಕೂಟದಲ್ಲೂ ಹೊಂದಾಣಿಕೆ ಹದಗೆಟ್ಟಿದೆ. ಮೈತ್ರಿಕೂಟದ ಪಾಲುದಾರರಲ್ಲಿ ನಂಬಿಕೆಯ ಕೊರತೆಯಿದೆ. ರಾಷ್ಟ್ರೀಯ ಮಟ್ಟದಲ್ಲಿ ನಂಬಿಕೆಯನ್ನು ಬೆಳೆಸುವ ಅವರ ಸಾಮರ್ಥ್ಯದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಸೇರಿಸಿದರು.
ಸಂಸದ ಡಿ.ಕೆ.ಸುರೇಶ್ ಕುಮಾರ್ ಅವರ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಉಲ್ಲೇಖಿಸಿದ ಮೋದಿ, ದೇಶವನ್ನು ಒಡೆಯುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ದೇಶವನ್ನು ಒಗ್ಗೂಡಿಸುವುದಿರಲಿ, ದೇಶವನ್ನು ಒಡೆಯುವ ಮಾತನಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.