ಲೋಕ ಚುನಾವಣೆಯತ್ತ ಚಿತ್ತವಿರಲಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೨:ಪಕ್ಷ ಬಿಡಲು ತಯಾರಾಗಿರುವ ಕೆಲ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಿ, ಆದರೆ, ಮಿತಿಮೀರಿ ವರ್ತಿಸಿ ಪಕ್ಷ ಬಿಟ್ಟೇಬಿಡುತ್ತೇನೆ ಎಂಬ ತೀರ್ಮಾನಕ್ಕೆ ಬಂದಿರುವ ವಲಸಿಗರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ, ಲೋಕಸಭಾ ಚುನಾವಣೆಯತ್ತ ಗಮನ ಹರಿಸಿ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.ಬೆಂಗಳೂರಿನಲ್ಲಿ ನಿನ್ನೆ ನಡೆದ ಬಿಜೆಪಿ ಪ್ರಮುಖರ ಕೋರ್‌ಕಮಿಟಿ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆಸಿ ವಸ್ತುಸ್ಥಿತಿಯ ವರದಿಯನ್ನು ರಾಜ್ಯನಾಯಕರು ಹೈಕಮಾಂಡ್‌ಗೆ ಕಳುಹಿಸಿದ್ದರು. ಹೈಕಮಾಂಡ್ ಈ ವರದಿಯನ್ನು ಗಮನಿಸಿ ಪಕ್ಷ ಬಿಟ್ಟು ಹೋಗುವವರನ್ನು ಒಂದು ಹಂತದವರೆಗೂ ಓಲೈಸಿ ತೀರಾ ದೈನೇಸಿಯಾಗಿ ಪ್ರಯತ್ನ ನಡೆಸುವುದು ಬೇಡ, ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವತ್ತ ಗಮನ ಕೊಡಿ. ಹಾಗೆಯೇ, ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿ ಎಂದು ಹೈಕಮಾಂಡ್ ರಾಜ್ಯನಾಯಕರಿಗೆ ಸೂಚಿಸಿದೆ.ಆಪರೇಷನ್ ಹಸ್ತಕ್ಕೆ ಸಿದ್ಧರಾಗಿರುವ ಬಿಜೆಪಿ ಶಾಸಕರ ಪಕ್ಷನಿಷ್ಠೆ ಗೊತ್ತಿರುವುದೇ, ಅಧಿಕಾರಕ್ಕಾಗಿ ಪಕ್ಷಬಿಟ್ಟು ಬಂದವರು ಮತ್ತೆ ಅಧಿಕಾರಕ್ಕಾಗಿ ಪಕ್ಷ ತೊರೆಯುತ್ತಿದ್ದಾರೆ.ಇಂತಹವರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ರಾಜಕಾರಣದಲ್ಲಿ ಇವೆಲ್ಲ ಇದ್ದದ್ದೆ ನಿಷ್ಠಾವಂತ ಕಾರ್ಯಕರ್ತರನ್ನು ಇಟ್ಟುಕೊಂಡು ಪಕ್ಷಬಲಪಡಿಸಿಎಂದು ಹೈಕಮಾಂಡ್ ಹೇಳಿದೆ.ಬಿಜೆಪಿ ಸರ್ಕಾರವಿದ್ದಾಗ ಎಲ್ಲ ರೀತಿಯ ಅಧಿಕಾರ ಅನುಭವಿಸಿ ಈಗ ಪಕ್ಷದ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ತೊಂದರೆಕೊಡುತ್ತಿದ್ದಾರೆ ಎಂಬ ಮಾತುಗಳು ಸರಿಯಲ್ಲ ಇದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರವಾಗುತ್ತದೆ. ಪಕ್ಷಕ್ಕೆ ಕಾರ್ಯಕರ್ತರೇ ಮುಖ್ಯ. ಹಾಗಾಗಿ, ಪಕ್ಷ ಬಿಡುವ ವಲಸಿಗರಿಗೆ ಹೆಚ್ಚು ವ್ಯಾಕುಲಗೊಳ್ಳುವ ಅಗತ್ಯವಿಲ್ಲ ಎಂದು ಹೈಕಮಾಂಡ್ ಹೇಳಿದೆ.
ಪಕ್ಷಬಿಟ್ಟು ಹೋಗುವವರ ಕ್ಷೇತ್ರಗಳಲ್ಲಿ ಈಗಿನಿಂದಲೇ ಪರ್ಯಾಯ ನಾಯಕತ್ವ ಸೃಷ್ಟಿಗೆ ಗಮನ ಕೊಡಬೇಕೋ ಅಲ್ಲೆಲ್ಲ ಪಕ್ಷಬಲವರ್ಧನೆಗೆ ಏನೇನು ಮಾಡಬೇಕೋ ಅದನ್ನು ಮಾಡಿ ಎಂದು ಹೈಕಮಾಂಡ್ ಹೇಳಿದೆ.

ಲೋಕಸಭಾ ಚುನಾವಣೆಯತ್ತ ಗಮನ ಹರಿಸಿ

ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ.

  • ವಲಸಿಗರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
  • ಉಳಿಸಿಕೊಳ್ಳಲು ಪ್ರಯತ್ನ ನಡೆಸಿ
  • ತೀರಾ ದೈನೇಸಿಯಾಗಿ ಪ್ರಯತ್ನ ನಡೆಸುವುದು ಬೇಡ
  • ಪರ್ಯಾಯ ನಾಯಕತ್ವಕ್ಕೆ ಒತ್ತು ನೀಡಿ