
ದಾವಣಗೆರೆ. ಏ.೨೫; ಜಗಜ್ಯೋತಿ ಬಸವೇಶ್ವರ, ವಚನಗಾರ್ತಿ ಅಕ್ಕಮಹಾದೇವಿ ಈ ಇಬ್ಬರು ನಮ್ಮ ಕರುನಾಡಿನ ಪ್ರಜ್ಞೆಯ ಸಂಕೇತ. ಸಮಾಜದಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಹೇಗೆ ಜೀವನ ನಡೆಸಬೇಕೆನ್ನುವುದಕ್ಕೆ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದು ಸಾಣೇಹಳ್ಳಿ ಶ್ರೀಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.ನಗರದ ಎಂಸಿಸಿ ಎ ಬ್ಲಾಕಿನಲ್ಲಿರುವ ಶ್ರೀಗುರುಬಸವ ಮಂಟಪದಲ್ಲಿ ಶ್ರೀಗುರು ಬಸವ ಮಂಟಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ, ದಾವಣಗೆರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಬಸವ ಜಯಂತಿ ಆಚರಣೆ ಕೇವಲ ಸಮಾರಂಭ ಮಾಡಿ ಸುಮ್ಮನಾಗುವುದಲ್ಲ. ಬಸವಣ್ಣನ ಹತ್ತಿರ ಹೋಗುವುದು. ಹತ್ತಾರು ವಚನ ಹೇಳುವುದಲ್ಲ. ಅವುಗಳ ಆಶಯಗಳಿಗೆ ಅನುಗುಣವಾಗಿ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಬೇಕೆಂದರು.ಬಸವಣ್ಣನವರು ಲೋಕ ಕಲ್ಯಾಣದ ಜೊತೆ ಆತ್ಮ ಕಲ್ಯಾಣ ಮಾಡಿಕೊಂಡವರು. ಅದೇ ರೀತಿ ಅಕ್ಕಮಹಾದೇವಿಯವರು ಲೋಕದ ಚಿಂತೆಗಿAದ ಆತ್ಮಾವಲೋಕದ ಚಿಂತನೆಗೆ ಹೆಚ್ಚು ಒತ್ತು ನೀಡಿದರು. ಆದರೆ ಇಂದಿನ ದಿನಮಾನಗಳಲ್ಲಿ ನಮ್ಮಗಳಿಗೆ ಈ ಇಬ್ಬರು ಮಹನೀಯರು ನಡೆದ ದಾರಿ ಬೇಕಾಗಿಲ್ಲ. ಬದಲಿಗೆ ತಮ್ಮದೇ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.ಬಸವಣ್ಣ ತಾನೊಬ್ಬ ಬದುಕಬೇಕೆಂದು ಹೇಳಲಿಲ್ಲ. ಎಲ್ಲರೂ ಚೆನ್ನಾಗಿ ಬದುಕಬೇಕು. ನಿಮ್ಮ ಸುಖವೇ ನಮ್ಮ ಸುಖ ಎಂದವರು. ಪುರೋಹಿತ ಪರಂಪರೆಯನ್ನು ನಿರಾಕರಣೆ ಮಾಡಿದವರು. ಆದರೆ, ನಾವುಗಳು ಇಂದು ಮತ್ತೆ ಆಂತಹ ಪುರೋಹಿತ ಪರಂಪರೆಯನ್ನೇ ದ್ವಾರ ಬಾಗಿಲಿನಿಂದ ಬರ ಮಾಡಿಕೊಂಡು ನಮ್ಮಲ್ಲಿ ನಡೆಯುವ ಎಲ್ಲಾ ಶುಭ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಪೂಜಾರಿ, ಪುರೋಹಿತರು ಮನೆಯನ್ನು ಹೋಮ ಹವನದಿಂದ ಮನೆಯನ್ನು ಹೊಗೆಯಿಂದ ತುಂಬಿಸುತ್ತಾರೆ. ಆದರೆ ಯಾವುದೇ ಶರಣರು ಯಾರನ್ನೂ ಉಸಿರುಕಟ್ಟಿಸಿ ಸಾಯಿಸುವಂತಹ ವಾತಾವರಣ ನಿರ್ಮಿಸಿರಲಿಲ್ಲ. ಎಲ್ಲಾ ರೀತಿಯ ಮೌಢ್ಯಗಳನ್ನು ಬಸವಣ್ಣ ನಿರಾಕರಿಸಿದ್ದರು. ಆದರೆ, ಬಸವಣ್ಣನ ಭಕ್ತರು ಎಷ್ಟರ ಮಟ್ಟಿಗೆ ಮೌಢ್ಯಗಳಿಂದ ಮುಕ್ತರಾಗಿದ್ದಾರೆ ಎಂದು ಪ್ರಶ್ನಿಸಿದರು.