ಲೋಕ ಕಲ್ಯಾಣಕ್ಕಾಗಿ ಆಷಾಡ ಲಕ್ಷ್ಮಿ ಪೂಜೆ

ಚಿಕ್ಕನಾಯಕನಹಳ್ಳಿ, ಜು. ೨೬- ಆಷಾಡ ಮಾಸದಲ್ಲಿ ಲೋಕ ಕಲ್ಯಾಣಕ್ಕಾಗಿ ಆಷಾಡ ಲಕ್ಷ್ಮೀಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತಿದೆ ಎಂದು ಭಾವಸಾರ ಸಮಾಜದ ಮುಖಂಡ ಜೋಗಿಹಳ್ಳಿ ಕೃಷ್ಣೋಜಿರಾವ್ ಹೇಳಿದರು.
ಪಟ್ಟಣದ ಉಡೇವು ಬೀದಿಯಲ್ಲಿ ಭಾವಸಾರ ಸಮಾಜದ ವತಿಯಿಂದ ಪ್ರತಿಷ್ಠಾಪಿಸಿದ ಆಷಾಡ ಲಕ್ಷ್ಮೀಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ೧೯ ವರ್ಷದಿಂದ ಭಾವಸಾರ ಸಮಾಜದಿಂದ ಮಣ್ಣಿನಲ್ಲಿ ಮಾಡಿದ ಆಷಾಡ ಲಕ್ಷ್ಮೀಯನ್ನು ಒಡವೆ ಹಾಗು ಹೂವಿನಿಂದ ಅಲಂಕರಿಸಿ ಮೊದಲ ದಿನ ಪೂಜಾ ವಿಧಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಎರಡನೇ ದಿನ ಶ್ರದ್ಧಾಭಕ್ತಿಯಿಂದ ಪೂಜಿಸಿ ಆರತಿ ಮಹಾಮಗಳಾರತಿ ಮಾಡಿ ಪ್ರಸಾದವನ್ನು ಭಕ್ತಿರಿಗೆ ನೀಡಲಾಗುವುದು. ಪ್ರತೀ ವರ್ಷವು ಈ ಧಾರ್ಮಿಕ ಕಾರ್ಯವನ್ನು ಅದ್ದೂರಿಯಾಗಿ ಮಾಡಲಾಗುತ್ತಿತ್ತು. ಈ ಬಾರಿ ಸರಳವಾಗಿ ದೇವತಾ ಕಾರ್ಯವನ್ನು ಮಾಡಲಾಗಿದೆ ಎಂದರು.
ಮಣ್ಣಿನಲ್ಲಿ ಮಾಡಿದ ಆಷಾಡ ಲಕ್ಷ್ಮೀಯ ವಿಗ್ರಹವನ್ನು ಮರೆವಣಿಗೆಯೊಂದಿಗೆ ಸಿಂಗದಳ್ಳಿ ಕೆರೆಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಸಮಾಜದ ಹಿರಿಯ ಮುಖಂಡರಾದ ಟೈಲರ್ ವಾಸು, ಸ್ಟುಡಿಯೋ ಪ್ರೇಮ್, ನಾಗೇಶ್‌ಬಾಬು, ದೀಪು, ದಯಾನಂದ್, ನವೀನ್ ಸೇರಿದಂತೆ ಸಮಾಜದ ಮಹಿಳೆಯರು ಭಾಗವಹಿಸಿದ್ದರು.