ಲೋಕ ಅದಾಲತ 42614 ಪ್ರಕರಣ ಇತ್ಯರ್ಥ

ಕಲಬುರಗಿ:ಮಾ.17:ಉಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಶನಲ್ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನ್ಯಾಶನಲ್ ಲೋಕ್ ಅದಾಲತ್ ಜರುಗಿದ್ದು, ಕಕ್ಷಿದಾರರು, ನ್ಯಾಯಾಧೀಶರು, ಸಂಧಾನಕಾರರು ಹಾಗೂ ಸಂಬಂಧಪಟ್ಟ ನ್ಯಾಯವಾದಿಗಳು ರಾಜಿ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಲಬುರಗಿ ಶ್ರೀಮತಿ ಎಸ್. ನಾಗಶ್ರೀ ಇವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ನ್ಯಾಯವಾದಿಗಳು ಹಾಗೂ ಕಕ್ಷಿದಾರರ ಸಹಕಾರದಿಂದ ನ್ಯಾಶನಲ್ ಲೋಕ್ ಅದಾಲತ್ ಮೂಲಕ ಸಿವಿಲ್ ದಾವೆಗಳು, ಮೋಟಾರು ವಾಹನ, ಅಪಘಾತ ಪರಿಹಾರ ಪ್ರಕರಣಗಳು, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಭೂಸ್ವಾಧೀನ ಪರಿಹಾರ ವಸೂಲಾತಿ ಪ್ರಕರಣಗಳು, ಬ್ಯಾಂಕ್‍ಗಳಿಗೆ ಸಂಬಂಧಿಸಿದ ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು ನೀರಿನ ಬಾಕಿ ಪ್ರಕರಣಗಳು ಸೇರಿದಂತೆ ಒಟ್ಟು 42614 ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ. ರೂ:46,49,19,183/- ಗಳ ಪರಿಹಾರ ಮೊತ್ತ ಇತ್ಯರ್ಥಗೊಂಡಿರುತ್ತದೆ ಹಾಗೂ ಕುಟುಂಬ ನ್ಯಾಯಾಲಯದ 11 ಪ್ರಕರಣಗಳಲ್ಲಿ ಬೇರ್ಪಡೆಹೊಂದಿದ ಪತಿ ಮತ್ತು ಪತ್ನಿಯರನ್ನು ಒಂದುಗೂಡಿಸಲಾಯಿತು ಮತ್ತು ಕಲಬುರಗಿ ಜಿಲ್ಲೆಯಲ್ಲಿ ಮೆಗಾ ಲೋಕ್ ಅದಾಲತ್ ಅದ್ಭುತ ಯಶಸ್ಸನ್ನು ಕಂಡಿರುತ್ತದೆ.