(ಸಂಜೆವಾಣಿ ವಾರ್ತೆ)
ಕುಂದಗೋಳ ಜು.9 : ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಹಿರಿಯ ದಿವಾಣಿ ನ್ಯಾಯಾಲಯದಿಂದ 397 ಹಾಗೂ ಕಿರಿಯ ದಿವಾಣಿ ನ್ಯಾಯಾಲಯದಿಂದ 259 ಪ್ರಕರಣಗಳು ಸೇರಿದಂತೆ ಒಟ್ಟು 656 ಪ್ರಕರಣಗಳು ಇತ್ಯರ್ಥವಾದವು.
ವಿಶೇಷವಾಗಿ ಹಿರಿಯ ದಿವಾಣಿ ನ್ಯಾಯಾಲಯ ಪೈಕಿ ಒಂದು ವೈವಾಹಿಕ ಹಾಗೂ ಕಿರಿಯ ದಿವಾಣಿ ನ್ಯಾಯಾಲಯ ಪೈಕಿ ಎರಡು ವೈವಾಹಿಕ ಪ್ರಕರಣಗಳು ಇತ್ಯರ್ಥವಾದ ಹಿನ್ನೆಲೆಯಲ್ಲಿ ದಂಪತಿಗಳ ಮಕ್ಕಳಿಗೆ ತಂದೆ-ತಾಯಿಯರ ಜತೆಗೆ ಕೂಡಿ ಬಾಳುವ ಅದೃಷ್ಟ ದೊರೆಯಿತು.
ಹಿರಿಯ ದಿವಾಣಿ ನ್ಯಾಯಾಲಯದಿಂದ ಅಸಲುದಾವೆ-47, ಮೋಟಾರು ವಾಹನ-1, ವೈವಾಹಿಕ-1, ಎಫ್ ಡಿಪಿ-1 ಹಾಗೂ 346 ಲಘು ಪ್ರಕರಣಗಳಿಗೆ ಮುಕ್ತಿ ಸಿಕ್ಕಂತಾಯಿತು. ಅದರಂತೆ ಕಿರಿಯ ದಿವಾಣಿ ನ್ಯಾಯಾಲಯದಿಂದ ಅಸಲುದಾವೆ-17, ಅಮಲುಜಾರಿ-1, ಎಫ್ ಡಿಪಿ-1, ಎನೈ ಯಾಕ್ಟ್-14, ಜೀವನಾಂಶ-6,, ಡಿವಿ ಯಾಕ್ಟ್-3, ಲಘು ಪ್ರಕರಣ-12 ಹಾಗೂ 202 ಪೆಟ್ಟಿ ಪ್ರಕರಣಗಳು ಅಂತ್ಯ ಕಂಡವು.
ಹಿರಿಯ ದಿವಾಣಿ ನ್ಯಾಯಾಧೀಶರಾದ ಪಿ.ಜೆ.ಪರಮೇಶ್ವರ ಅವರು ಮಾತನಾಡಿ ರಾಜೀ ಸಂಧಾನದಿಂದ ಕುಟುಂಬ ಜೀವನ ಸುಧಾರಿಸುತ್ತದೆ. ಪ್ರತಿಯೊಂದಕ್ಕೂ ವ್ಯಾಜ್ಯ ಮಾಡಿ ಕೋರ್ಟಿಗೆ ಬರುವುದು ಒಳ್ಳೆಯದಲ್ಲ ಎಂದು ವಾದಿ-ಪ್ರತಿವಾದಿಗಳಿಗೆ ಕಿವಿಮಾತು ಹೇಳಿದರು. ಅದೇರೀತಿ ಕಿರಿಯ ದಿವಾಣಿ ನ್ಯಾಯಾಧೀಶರಾದ ಗಾಯತ್ರಿ ಅವರು ಮಾತನಾಡಿ ವ್ಯಾಜ್ಯಗಳನ್ನು ದೂರಮಾಡಿ ಸುಖದಿಂದ ಬಾಳಬಾಳಬೇಕು ಎಂದು ದಾಂಪತ್ಯ ಕುಟುಂಬಕ್ಕೆ ತಿಳುವಳಿಕೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ವಿ.ಎಲ್.ಹಡಪದ, ಎಸ್. ಎಂ.ಬೋವಿ, ವೈ.ಎಂ.ತಹಶೀಲ್ದಾರ, ಎಂ.ಎಂ.ಗೂಡವಾಲ, ಜಿ.ಬಿ.ಸೊರಟೂರ, ರಮೇಶ್ ಕಮತದ, ಜಪಾನಿನ ಮತ್ತು ಸಂತೋಷ ಅವರು ಸೇರಿದಂತೆ ಅನೇಕ ನ್ಯಾಯವಾದಿಗಳು ಹಾಗೂ ವಾದಿ-ಪ್ರತಿವಾದಿಗಳಿದ್ದರು.