ಲೋಕ ಅದಾಲತ್:ಕಹಿ ಮರೆತು ಮತ್ತೆ ಒಂದಾದ 9 ದಂಪತಿ

ಕಲಬುರಗಿ,ಜು 9: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟದಲ್ಲಿ ತೊಡದಿದ್ದ ಸತಿ ಪತಿಯರು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ಸಮ್ಮುಖದಲ್ಲಿ ಮತ್ತೆ ಒಟ್ಟಿಗೆ ಸಂಸಾರ ಮಾಡುವ ಸಂಕಲ್ಪದೊಂದೊಗೆ ಹಾರ ಬದಲಿಸಿಕೊಂಡರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರನ್ನು ಲೋಕ ಅದಾಲತ್ ನಲ್ಲಿ ಭಾಗವಹಿಸುವಂತೆ ಮನವೊಲಿಸಿ ಒಟ್ಟಾಗಿ ಹೋಗುವಂತೆ ನ್ಯಾಯಮೂರ್ತಿಗಳು ಸಲಹೆ ನೀಡಿದರು.ಈ ಸಲಹೆಯನ್ನು ಒಪ್ಪಿ 9 ಜೋಡಿಗಳು ಪರಸ್ಪರ ಹಾರ ಬದಲಿಸಿದರು.ನಂತರ ಸತಿ,ಪತಿ ಪರಸ್ಪರ ಸಿಹಿ ತಿನ್ನಿಸಿ ಕಹಿ ಮರೆತರು.
ಈ ಸಂದರ್ಭದಲ್ಲಿ ಹೈಕೋರ್ಟ ನ್ಯಾಯಮೂರ್ತಿ ಎಚ್.ಟಿ ನರೇಂದ್ರ ಪ್ರಸಾದ, ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತಕುಮಾರ,ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಮರುಳಸಿದ್ಧಾರಾಧ್ಯ,ಎಚ್,ಜೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೃಷ್ಣಾಜಿ ಬಿ ಪಾಟೀಲ,ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಹೇಮಾವತಿ ಹಾಗೂ ಇತರರು ಉಪಸ್ಥಿತರಿದ್ದರು.