ಲೋಕ್ ಅದಾಲತ್‍ನಲ್ಲಿ 6453 ಪ್ರಕರಣಗಳಿಗೆ ರಾಜೀ ಸಂಧಾನ

ಬಾಗಲಕೋಟೆ: ಮಾ 30 : ಬಾಗಲಕೋಟೆ ಜಿಲ್ಲಾ ನ್ಯಾಯಾಲಯದ ಅಧೀನದಲ್ಲಿ ಮಾರ್ಚ 27 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ತೆಗೆದುಕೊಳ್ಳಲಾದ 9818 ಪ್ರಕರಣಗಳ ಪೈಕಿ 6453 ಪ್ರಕರಣಗಳಿಗೆ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಲ್ಪನಾ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಶಿಬಿರ ಕಾರ್ಯಕ್ರಮ ನಡೆಸಲಾಯಿತು. ಲೋಕ ಅದಾಲತ್ ಶಿಬಿರದಲ್ಲಿ ಒಟ್ಟು 9818 ಪ್ರಕರಣಗಳಲ್ಲಿ 684 ವಾಜ್ಯ ಪೂರ್ವ ಪ್ರಕರಣಗಳು ಮತ್ತು 9134 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 478 ವಾಜ್ಯ ಪೂರ್ವ ಹಾಗೂ 5975 ನ್ಯಾಯಾಲಯದಲ್ಲಿ ವಿಚಾರಣೆಗಾಗಿ ತೆಗೆದುಕೊಳ್ಳಲಾದ ಪ್ರಕರಣಗಳು ಸೇರಿ ಒಟ್ಟು 6453 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ರಾಜೀ ಸಂಧಾನ ಮಾಡಿಸಲಾಯಿತು. ಈ ಎಲ್ಲ ಪ್ರಕರಣಗಳಿಗೆ ಅಂದಾಜು 39.92 ಕೋಟಿ ರೂ.ಗಳಿಗೆ ರಾಜೀ ಮಾಡಿಸಲಾಯಿತು.
ಬಾಗಲಕೋಟೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿವಿಧ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಒಟ್ಟು 3223 ಪ್ರಕರಣಗಳ ಪೈಕಿ 2339 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿ ಕೋರ್ಟನಲ್ಲಿ 419 ಪ್ರಕರಂಗಳ ಪೈಕಿ 314, ಮುಧೋಳ ಕೋರ್ಟನಲ್ಲಿ 547 ಪ್ರಕರಣಗಳ ಪೈಕಿ 360, ಬನಹಟ್ಟಿ ಕೋರ್ಟನಲ್ಲಿ 981 ಪ್ರಕರಣಗಳ ಪೈಕಿ 695, ಹುನಗುಂದ ಕೋರ್ಟನಲ್ಲಿ 878 ಪ್ರಕರಣಗಳ ಪೈಕಿ 373, ಜಮಖಂಡಿ ಕೋರ್ಟನಲ್ಲಿ 2178 ಪ್ರಕರಣಗಳ ಪೈಕಿ 1478 ಹಾಗೂ ಬಾದಾಮಿ ಕೋರ್ಟನಲ್ಲಿ 786 ಪ್ರಕರಣಗಳ ಪೈಕಿ 416 ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.
ಲೋಕ ಅದಾಲತ್ ಶಿಬಿರದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ ಸಿ.ಬಿ, ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಶೀಲಾ ಎನ್, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ವಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಎ.ಹೆಚ್.ಮೊಗಲಾನಿ, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಆರ್.ಎಲ್.ಹೊನೊಲೆ, ಪ್ರಧಾನ ದಿವಾಣಿ ನ್ಯಾಯಾಧೀಶ ನಾಗರಾಜ ಎಸ್, ಜಿಲ್ಲಾ ನ್ಯಾಯಾಲಯದ ಆಡಳಿತ ಸಹಾಯಕ ಎಂ.ಎಚ್.ಕಡಕೋಳ ಸೇರಿದಂತೆ ಕಕ್ಷಿದಾರರು, ವಕೀಲರು ಇದ್ದರು. ವಕೀಲರಾದ ಪಿ.ಬಿ.ಮೊಹರೀರ್, ಎಂ.ಎಸ್.ಹೊಸಮನಿ, ರಾಜೇಶ ಮುಗಜಿ ಸಂಧಾನಕಾರರಾಗಿ ಭಾಗವಹಿಸಿದ್ದರು.