
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೫: ಜಿಲ್ಲೆಯಲ್ಲಿ ನಡೆದ ಲೋಕ್ ಅದಾಲತ್ತಿನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದ್ದು, ಒಂದು ರೀತಿಯಲ್ಲಿ ದಾಖಲೆ ಎನ್ನಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್ ಹೆಗಡೆ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ದೇವರಾಜ ಅರಸು ಬಡಾವಣೆಯ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಜಿಲ್ಲಾ ವಕೀಲರ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಲೋಕ್ ಅದಾಲಾತ್ ಯಶಸ್ವಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾನೂನು ಸೇವಾ ಪ್ರಾಧಿಕಾರ, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರ ಸೂಚನೆಯಂತೆ ವಕೀಲರು ತಮ್ಮ ಕಕ್ಷಿದಾರರನ್ನು ಮನವೊಲಿಸಿ ಎಲ್ಲಾ ರೀತಿಯ ಪ್ರಕರಣಗಳನ್ನು ಬಹುತೇಕ ಇತ್ಯರ್ಥ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರೆಣ್ಣವರ ಮಾತನಾಡಿ, ಲೋಕ್ ಅದಾಲತ್ತಿನಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಇದಕ್ಕೆಲ್ಲ ವಕೀಲರ ಸಹಕಾರವೇ ಕಾರಣ. ಕಕ್ಷಿದಾರನಿಗೆ ಮನವೊಲಿಸಿ ರಾಜೀ ಸಂಧಾನದ ಮೂಲಕ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದ ಮೂಲಕ ಲೋಕ್ ಅದಾಲತ್ತಿನಲ್ಲಿ ಇತ್ಯರ್ಥ ಮಾಡಿಕೊಂಡ ಪ್ರಕರಣಗಳ ಕುರಿತು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಪ್ರಶಂಸೆ ವ್ಯಕ ಪಡಿಸಿದ್ದಾರೆ. ಕಾರಣ ಇನ್ನೂ ಹೆಚ್ಚಿನ ಪ್ರಕರಣಗಳನ್ನು ಬಗೆಹರಿಸಿ ಕೊಂಡು ನಮ್ಮ ದಾಖಲೆಯನ್ನು ನಾವೇ ಮುರಿಯಬೇಕು ಎಂದು ಹೇಳಿದರು.ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಸೇರಿ ಸಂವಿಧಾನದ ಪೀಠಿಕೆ ಓದುವ ದಿನ ಇದಾಗಿದೆ. ಸಂವಿಧಾನದ ಆಶಯಗಳನ್ನು ಅರಿತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ. ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಅಹಿಂಸಾತ್ಮಕ ಹಾದಿಯಲ್ಲಿ ಸಾಗುವ ಮೂಲಕ ಏಕತೆಯನ್ನು ಕಾಪಾಡಿಕೊಂಡು ಬರುತ್ತಿದ್ದೇವೆ. ಇದನ್ನು ಇಡೀ ಪ್ರಪಂಚವೇ ಕೊಂಡಾಡಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ವಿ.ವಿಜಯಾನಂದ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್.ಪ್ರವೀಣ್ ಕುಮಾರ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ದಶರಥ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಹೆಚ್.ಟಿ.ಎಫ್.ಸಿ-1 ನ್ಯಾಯಾಧೀಶರಾದ ಎನ್. ಶ್ರೀಪಾದ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಆದ ಶಿವಪ್ಪ ಗಂಗಪ್ಪ ಸಲಗರೆ, ಹಾಗೂ ಸ್ಥಳಿಯ ಎಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಆರ್.ಭಾಗ್ಯಲಕ್ಷ್ಮಿ, ಚೌಡಪ್ಪ, ಎಲ್.ನಾಗರಾಜ್, ಸಂತೋಷ ಕುಮಾರ್, ಮಧು, ಅಜೇಯ, ವಾಗೀಶ್ ಕಟಿಗೆಹಳ್ಳಿ ಮಠ, ರಾಘವೇಂದ್ರ ಇತರರು ಇದ್ದರು.