ಲೋಕೋಪಯೋಗಿ ಭವನ ಕೋವಿಡ್ ಆಸ್ಪತ್ರೆಯನ್ನಾಗಿ ಬಳಕೆಗೆ ನಿರ್ಧಾರ

ಕಲಬುರಗಿ : ಏ.25: ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ನೂತನ ಕಟ್ಟಡವನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬಳಕೆ ಮಾಡಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.
ಆ ಹಿನ್ನೆಲೆಯಲ್ಲಿ ಭಾನುವಾರ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಲೋಕೋಪಯೋಗಿ ಇಲಾಖೆಯ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಲೋಕೋಪಯೋಗಿ ಭವನವನ್ನು ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಂಡಲ್ಲಿ ಸುಮಾರು 300 ಹಾಸಿಗೆಗಳ ವ್ಯವಸ್ಥೆಯನ್ನು ಕಲ್ಪಿಸಬಹುದಾಗಿದೆ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಹೇಳಿದರು.
ಈಗಾಗಲೇ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. ಸೋಂಕಿತರಿಗೆ ಆಕ್ಸಿಜನ್ ಒಳಗೊಂಡ ಹಾಸಿಗೆಗಳು ಸಿಗುತ್ತಿಲ್ಲ. ಭಾನುವಾರವೂ ಸಹ ಗೃಹ ರಕ್ಷಕದಳದ ಸಿಬ್ಬಂದಿಯೊಬ್ಬರು ತಮ್ಮ ತಾಯಿ ಕೋವಿಡ್ ಸೋಂಕಿಗೆ ಒಳಗಾಗಿದ್ದು ಆಕ್ಸಿಜನ್ ಒಳಗೊಂಡ ಬೆಡ್ ಕೊಡಲು ಜಿಮ್ಸ್ ಆಸ್ಪತ್ರೆಯ ಮುಂದೆ ಅಳಲು ತೋಡಿಕೊಂಡರೂ ಸಹ ಬೆಡ್ ಸಿಗದೇ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಹೀಗಾಗಿ ಹೆಚ್ಚಿನ ಬೆಡ್‍ಗಳನ್ನು ಸೃಷ್ಟಿಸುವುದು ಅನಿವಾರ್ಯವಾಗಿದೆ.