ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲಾ ಕಟ್ಟಡಗಳಿಗೆ ಆದ್ಯತೆ ನೀಡಿ : ಗೋವಿಂದ ಕಾರಜೋಳ

ದಾವಣಗೆರೆ ಜ.8; ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲೆಗಳು ಹಾಗೂ ಸಮುದಾಯ ಭವನಗಳಿಗೆ ಆದ್ಯತೆ ನೀಡಿ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.  ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ದಾವಣಗೆರೆ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಬಹಳಷ್ಟು ಇಲಾಖೆಗಳು ರಸ್ತೆ, ಚರಂಡಿ ಕಾಮಗಾರಿಗಳಿಗೆ ಹಣ ನೀಡುವುದರಿಂದ ಕಾಮಗಾರಿಗಳು ಆದ ಕಡೆಯಲ್ಲಿಯೇ ಮತ್ತೆ ಮತ್ತೆ ಆಗುವುದರಿಂದ ಪ್ರಯೋಜನವಿಲ್ಲ. ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್, ಜಿ.ಪಂ, ಸಣ್ಣ ನೀರಾವರಿ ಮುಂತಾದ ಇಲಾಖೆಗಳು ಹಣ ನೀಡುವುದರಿಂದ ಕಾಮಗಾರಿಗಳು ಪುನರಾವರ್ತಿತವಾಗುತ್ತಿವೆ. ಆದ ಕಾರಣ ಇನ್ನು ಮುಂದೆ ಅಂಗನವಾಡಿಗಳು, ಶಾಲಾ ಕಟ್ಟಡಗಳು ಮತ್ತು ಸಮುದಾಯ ಭವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.ಬಹುತೇಕ ಎಸ್‌ಸಿ/ಎಸ್‌ಟಿ ಕಾಲೋನಿಗಳಲ್ಲಿ ಅವರ ಮನೆಗಳ ಮುಂದಿನ ರಸ್ತೆಯು ಮನೆ ಬಾಗಿಲಿಗಿಂತ ಒಂದರಿAದ ಎರಡು ಅಡಿ ಎತ್ತರವಿರುತ್ತದೆ. ಹಾಗಾಗಿ ಮಳೆ ನೀರು ಮನೆ ಒಳಗೆ ನುಗ್ಗುತ್ತಿದೆ. ಆದ ಕಾರಣ ಕೇವಲ ರಸ್ತೆ ಕಾಮಗಾರಿಗಳಿಗೇ ಹಣ ವಿನಿಯೋಗಿಸುವ ಬದಲು, ಲಭ್ಯವಿರುವ ಸ್ಥಳಗಳಲ್ಲಿ ಉದ್ಯೋಗ ಸೃಜನೆಯಾಗುವಂತಹ ಹಾಗೂ ಇಲಾಖೆಗೆ ಶಾಶ್ವತ ಆಸ್ತಿಯಾಗುವಂತಹ ಪುಟ್ಟ ಪುಟ್ಟ ಅಂಗಡಿ, ಮಳಿಗೆಗಳನ್ನು ನಿರುದ್ಯೋಗಿಗಳಿಗೆ ನಿರ್ಮಿಸಿಕೊಟ್ಟಲ್ಲಿ ಅವರಿಗೆ ಉದ್ಯೋಗ ದೊರಕಿಸಿಕೊಟ್ಟಾಂಗುತ್ತದೆ ಎಂದರು.      ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ನಾಮಫಲಕಗಳು ಕಂಡು ಬರುತ್ತಿಲ್ಲ. ಸ್ಟೀಲ್ ಅಥವಾ ಕಬ್ಬಿಣದ ನಾಮಫಲಕಗಳನ್ನು ಹಾಕುವುದರಿಂದ ಅವುಗಳನ್ನು ಅಪಹರಿಸಿಕೊಂಡು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಿಮೆಂಟಿನ ಅಚ್ಚಿನಲ್ಲಿ ತಯಾರಿಸಿರುವ ನಾಮಫಲಕಗಳನ್ನು ಹಾಕಿದರೆ ಸಣ್ಣ ಪುಟ್ಟ ರಿಪೇರಿ ಬಂದರೆ ಮಾಡಿಸಿಕೊಳ್ಳಬಹುದು ಎಂದರು.ಇಲಾಖೆಯ ಒಡೆತನದಲ್ಲಿರುವ ಹಲವು ಪ್ರವಾಸಿ ಮಂದಿರಗಳಲ್ಲಿ ನಿರ್ವಹಣೆ ಇಲ್ಲವಾಗಿದೆ. ಕೆಲೆವೆಡೆ ಸಿಬ್ಬಂದಿ ಕೊರತೆಯಿಂದ ಕಸ ಗುಡಿಸುವವರೂ ಇಲ್ಲ. ಹಾಗಾಗಿ ಇಲಾಖೆಯ ಪ್ರವಾಸಿ ಮಂದಿರಗಳನ್ನು ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ನೀಡುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.   ಸಾರ್ವಜನಿಕರು ರಸ್ತೆಗಳನ್ನು ಅಗೆಯುವ ಮುನ್ನ ಇಲಾಖೆಯ ವತಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದೇ ರಸ್ತೆ ಅಗೆದರೆ ಅಂತಹವರ ವಿರುದ್ದ ಮೊಕದ್ದಮೆ ದಾಖಲಿಸಿ ಎಫ್‌ಐಆರ್ ಮಾಡಲಾಗುವುದು ಎಂದರು.