ಲೋಕೋಪಯೋಗಿ ಇಲಾಖೆ ಎಇಇ ಕುಚೋದ್ಯಕ್ಕೆ ಆಕ್ರೋಶ

ಮಾಧ್ಯಮ ಪ್ರತಿನಿಧಿ ’ಪೌರ’ ಅಲ್ವಂತೆ, ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಲು ಹಕ್ಕಿಲ್ವಂತೆ..!
ದುರುಗಪ್ಪ ಹೊಸಮನಿ
ಲಿಂಗಸುಗೂರು.ನ.೭-ಮಾಹಿತಿ ಹಕ್ಕು ಅಧಿನಿಯಮ-೨೦೦೫ರ ಅಡಿಯಲ್ಲಿ ಒಬ್ಬ ವ್ಯಕ್ತಿಯಾಗಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಲು ನಿಯಮದಲ್ಲಿ ಅವಕಾಶವಿರುತ್ತದೆ. ಆದರೆ, ಉಲ್ಲೇಖಿತ ಅರ್ಜಿಯಲ್ಲಿ ಅರ್ಜಿದಾರರಾದ ತಾವು ಮಾಧ್ಯಮದ ಅಂಗವಾಗಿರುವುದರಿಂದ ’ಪೌರ’ (ಸಿಟಿಜನ್) ವ್ಯಾಖ್ಯೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಲು ಬಾಧ್ಯಸ್ಥರಲ್ಲ (ಹಕ್ಕಿರುವುದಿಲ್ಲ) ಎಂದು ಪತ್ರಕರ್ತರೊಬ್ಬರು ಕೇಳಿದ ಮಾಹಿತಿಗೆ ಇಲಾಖೆಯ ಮುಖ್ಯಸ್ಥರೊಬ್ಬರು ಹಿಂಬರಹ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೀಡಾಗಿದೆ.
ಸಂವಿಧಾನದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕಾ ರಂಗದ ಪ್ರತಿನಿಧಿಯನ್ನೇ ದೇಶದ ಪೌರ ಅಲ್ಲ ಎನ್ನುವಷ್ಟರ ಮಟ್ಟಿಗೆ ಕುಚೋದ್ಯತನ ಪ್ರದರ್ಶನ ಮಾಡುವ ಮೂಲಕ ಪತ್ರಕರ್ತರನ್ನು ಅವಹೇಳನ ಮಾಡಿದ ಘಟನೆಯೊಂದು ಸ್ಥಳೀಯ ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿದೆ.
ಎಇಇ ಜಗದೇವ ಮೋತಿಯರಲ್ಲಿ ಮಾಹಿತಿ ಕೋರಿ ಪತ್ರಕರ್ತರೊಬ್ಬರು ಮಾಹಿತಿ ಹಕ್ಕು ಅಧಿನಿಯಮ-೨೦೦೫ರ ಅಡಿಯಲ್ಲಿ ಮಾಹಿತಿ ಒದಗಿಸುವಂತೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಎಇಇ ಮೋತಿಯವರು, ಮೇಲಿನಂತೆ ಹಿಂಬರಹ ನೀಡಿದ್ದಾರೆ. ಅಲ್ಲದೇ, ಮಾಹಿತಿ ಹಕ್ಕು ಅಧಿನಿಯಮ-೨೦೦೫ರ ಅಡಿಯಲ್ಲಿ ಒಬ್ಬ ವ್ಯಕ್ತಿಯಾಗಿ ನಿಯಮಾನುಸಾರ ಮಾಹಿತಿ ಕೋರಿ ಈ ಕಚೇರಿಗೆ ಅರ್ಜಿ ಸಲ್ಲಿಸಿದಲ್ಲಿ ನಿಯಮಾನುಸಾರ ಅಪೇಕ್ಷಿತ ಮಾಹಿತಿಯನ್ನು ಒದಗಿಸಲಾಗುವುದು ಎನ್ನುವ ಮೂಲಕ ಪತ್ರಕರ್ತನನ್ನು ಪೌರ (ನಾಗರಿಕ) ಅಲ್ಲ ಎನ್ನುವ ಮೂಲಕ ಅವಹೇಳನ ಮಾಡಿರುವುದು ಖಂಡನೀಯವಾಗಿದೆ.