
ಬೆಂಗಳೂರು, ಮಾ. ೮- ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಿರೀಕ್ಷಣಾ ಜಾಮೀನು ಪಡೆದಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಲೋಕಾಯುಕ್ತರ ಮುಂದೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ರಾಜ್ಯದ ಉಚ್ಛ ನ್ಯಾಯಾಲಯ ನಿನ್ನೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ೪೮ ಗಂಟೆಯೊಳಗೆ ಲೋಕಾಯುಕ್ತರ ಪೊಲೀಸರ ಮುಂದೆ ಶರಣಾಗುವಂತೆ ಸೂಚನೆ ನೀಡಿತ್ತು. ಅದರಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಸಂಜೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ನಿರೀಕ್ಷಣಾ ಜಾಮೀನು ಮಂಜೂರಾಗುತ್ತಿದ್ದಂತೆಯೇ ಚನ್ನಗಿರಿ ತಾಲ್ಲೂಕಿನ ಚನ್ನಕೇಶವಪುರದಲ್ಲಿ ಅವರ ಬೆಂಬಲಿಗರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಮಾಡಾಳ್ ಪುರ ಜೈಕಾರದ ಘೋಷಣೆಗಳನ್ನು ಕೂಗಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಬೆಂಗಳೂರಿನ ತಮ್ಮ ಮನೆಯಲ್ಲಿ ಸಿಕ್ಕಿರುವ ೮ ಕೋಟಿ ಹಣ ನಮ್ಮದೆ. ಅದಕ್ಕೆ ಲೆಕ್ಕ ಕೊಡುತ್ತೇವೆ. ನಮ್ಮದು ದೊಡ್ಡ ಕೃಷಿಕ ಕುಟುಂಬ. ೧೨೫ ಎಕರೆ ಅಡಿಕೆ ತೋಟವಿದೆ. ೨ ಕ್ರಷರ್ ಇದೆ. ಎಲ್ಲದಕ್ಕೂ ಲೆಕ್ಕಕೊಟ್ಟು ಹಣ ವಾಪಸ್ ಪಡೆಯಲಾಗುವುದು ಎಂದು ಹೇಳಿದರು.
ಚನ್ನಗಿರಿಯ ಹುಟ್ಟೂರಿನಲ್ಲಿದ್ದ ಮಾಡಾಳ್ ಅವರು ಇಂದು ಬೆಳಿಗ್ಗೆ ಚನ್ನಗಿರಿಯಿಂದ ಹೊರಟಿದ್ದು, ಬೆಂಗಳೂರಿಗೆ ಆಗಮಿಸಿ ಸಾಧ್ಯವಾದರೆ ಇಂದು ಸಂಜೆಯೇ ಲೋಕಾಯುಕ್ತರ ಮುಂದೆ ಹಾಜರಾಗುವರು. ಇಲ್ಲದಿದ್ದರೆ ನಾಳೆ ಬೆಳಿಗ್ಗೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.
ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಶಾಸಕ ಮಾಡಾಳ್ ವಿರೂಪಕ್ಷಪ್ಪ ಮೊದಲನೇ ಆರೋಪಿಯಾಗಿದ್ದಾರೆ. ಹಾಗಾಗಿ ಅವರ ವಿಚಾರಣೆಗೆ ಲೋಕಾಯುಕ್ತ ಪೊಲೀಸರು ಸಕಲ ಸಿದ್ದತೆ ಮಾಡಿಕೊಂಡಿದ್ದು, ಹಣದ ಮೂಲದ ಬಗ್ಗೆ ಪ್ರಶ್ನೆಗಳನ್ನು ಕೇಳಲಿದ್ದಾರೆ.