
ಚಿನ್ನ,ನಗದು ಪತ್ತೆ
ಬೆಂಗಳೂರು,ಏ.೨೪-ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಬಿಬಿಎಂಪಿಯ ನಗರ ಯೋಜನಾ ವಿಭಾಗದ ಯಲಹಂಕ ವಲಯ ಕಚೇರಿಯ ಸಹಾಯಕ ನಿರ್ದೇಶಕ(ಎಡಿಟಿಪಿ) ಗಂಗಾಧರಯ್ಯ ಅವರ ಮನೆ ಮೇಲೆ ದಾಳಿಮಾಡಿರುವ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಗಂಗಾಧರಯ್ಯ ವಿರುದ್ಧ ಲೋಕಾಯುಕ್ತ ನಗರ ಪೊಲೀಸ್ ಘಟಕ ಪ್ರಕರಣ ದಾಖಲಿಸಿದೆ. ಆರೋಪಿಯ ಯಲಹಂಕದ ಮನೆ ಮೇಲೆ ನಸುಕಿನಲ್ಲೇ ದಾಳಿಮಾಡಿದ್ದು, ಶೋಧ ನಡೆಸುತ್ತಿದ್ದಾರೆ.ಗಂಗಾಧರಯ್ಯ ಅವರ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಅಕ್ರಮವಾಗಿ ಸಂಗ್ರಹಿಸಿದ್ದ ೮೦ ಲಕ್ಷ ಹಣ, ೫೦ ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ.ಗಂಗಾಧರಯ್ಯ ಅವರಿಗೆ ಸೇರಿದ ಯಲಹಂಕದಲ್ಲಿನ ಕಚೇರಿ, ಮಹಾಲಕ್ಷ್ಮಿ ಲೇಔಟ್‌ನಲ್ಲಿನ ಸಂಬಂಧಿಗಳ ನಿವಾಸ ಹಾಗೂ ಕುರುಬರಹಳ್ಳಿ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದಾರೆ.ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ನಗದು ಪತ್ತೆಯಾಗಿದ್ದು ಅಧಿಕಾರಿಗಳು ಹಣ ಎಣಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ತಹಶೀಲ್ದಾರ್ ಗೆ ಗಾಳ:
ನಿವೃತ್ತ ಡಿಸಿಎಫ್ ನಾಗರಾಜ್ ಅವರ ಶಿವಮೊಗ್ಗದ ಮನೆ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಅವರ ಶಿಕಾರಿಪುರದಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.ಹಾಗೂ ನಿವೃತ್ತ ಡಿಸಿಎಫ್ ನಾಗರಾಜ್ ಅವರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ಇಬ್ಬರು ಅಧಿಕಾರಿಗಳ ಏಳು ಸ್ಥಳಗಳ ಮೇಲೆ ಏಕ ಕಾಲಕ್ಕೆ ರೇಡ್ ಆಗಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.
ಬೀದರ್ ನಲ್ಲಿ ದಾಳಿ:
ಬೀದರ್ ಜಿಲ್ಲೆಯಾದ್ಯಂತ ೬ ಕಡೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಮುಡಬಿ ಉಪ ತಹಶೀಲ್ದಾರ್ ವಿಜಯಕುಮಾರ್ ಸ್ವಾಮಿಯವರ ಆನಂದ್ ನಗರ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೇ ಅವರು ಕಾರ್ಯನಿರ್ವಹಿಸುವ ಮುಡುಬಿಯ ಕಚೇರಿ ಹಾಗೂ ಬಸವಕಲ್ಯಾಣ ಪಟ್ಟಣದ ಹೊಂದಿರುವ ಗ್ಯಾರೇಜ್ ಮೇಲೂ ದಾಳಿ ಮಾಡಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ಸುರೇಶ್ ಮೇದಾ ಅವರ ಗುರುನಗರದ ನಿವಾಸ ಹಾಗೂ ನೌಬಾದ್‌ನಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಎ.ಆರ್ ಕರ್ನೂಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎನ್.ಎಂ ಓಲೇಕಾರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆದಿದೆ.
ಜೆಸ್ಕಾಂ ಎಇಇ ಗೆ ಗಾಳ:
ಬಳ್ಳಾರಿಯ ಜೆಸ್ಕಾಂ ಎಇಇ ಮನೆ ಮೇಲೆ ಬೆಂಗಳೂರು ಮತ್ತು ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ. ಬಳ್ಳಾರಿಯ ಎಇಇ ಕಾರ್ಯನಿರ್ವಹಿಸುವ ಹುಸೇನ್ ಸಾಬ್ ಅವರ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ ಹಾಗೂ ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಶಿಡಿಗಿನಮೊಳದಲ್ಲಿರುವ ಮನೆಯ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಫಾರಂ ಹೌಸ್ ಮೇಲೆ ದಾಳಿ:
ಬಿಬಿಎಂಪಿ ಜೆಇಇಟಿ ಹನುಮಂತರಾಯ ಅವರ ಚಿತ್ರದುರ್ಗದ ಬೋಚಾಪುರದ ಫಾರಂ ಹೌಸ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.
ನಿವೃತ್ತ ಡಿಸಿಎಫ್ ನಾಗರಾಜ್ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ನಾಗರಾಜ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸಿಎಫ್ ಅವರ ಶಿವಮೊಗ್ಗ ಮನೆ ಹಾಗೂ ತಹಶೀಲ್ದಾರ್ ಅವರ ಶಿಕಾರಿಪುರದ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಡಿಸಿಎಫ್ ಅವರ ದಾವಣಗೆರೆ ಬಳಿಯ ತೋಟದ ಮನೆಯ ಮೇಲೂ ದಾಳಿ ನಡೆದಿದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಂದ ಏಳು ಕಡೆ ದಾಳಿ ನಡೆದಿದ್ದು ಪರಿಶೀಲನೆ ನಡೆಸಲಾಗುತ್ತಿದೆ.
ಬಂಗಾರಪೇಟೆಯಲ್ಲಿ ದಾಳಿ:
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ ಅವರ ಮನೆ ಮೇಲೆ ಲೋಕಾ ದಾಳಿ ನಡೆದಿದೆ.ನಗರದಲ್ಲಿ ಮೂರು ಕಡೆ ಹಾಗೂ ಮುಳಬಾಗಿಲು ತಾಲ್ಲೂಕಿನ ತಿಪ್ಪದೊಡ್ಡಿಯಲ್ಲಿ ಎರಡು ಕಡೆ, ಒಟ್ಟು ವೆಂಕಟೇಶಪ್ಪ ಅವರಿಗೆ ಸೇರಿದ ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ.ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆ ತಾಲ್ಲೂಕು ಪಂಚಾಯತ್ ಇಓ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶಪ್ಪ ಅವರಿಗೆ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ವರ್ಗಾವಣೆಯಾಗಿತ್ತು. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಐಟಿ ದಾಳಿ
ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಮನೆ ಸೇರಿದಂತೆ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ಟಿಕೆಟ್ ರಕ್ಷಿತ್ ಶಿವರಾಂ ಅವರಿಗೆ ಲಭಿಸುತ್ತಲೆ ರಾಜಕೀಯ ಓಡಾಟದಿಂದ ಹಿಂದೆ ಸರಿದಿದ್ದರು. ಇದೀಗ ಐಟಿ ದಾಳಿ ಶಾಕ್ ನೀಡಿದೆ.ಮನೆಯಲ್ಲಿರುವ ಸ್ವತ್ತು, ಕಾಲೇಜಿನ ದಾಖಲೆ ಸಹಿತ ಪೊಲೀಸ್ ತಂಡದ ಸಮ್ಮುಖದಲ್ಲಿ ತಪಾಸಣೆ ಕೈಗೊಂಡಿದೆ.
ಗಂಗಾಧರಯ್ಯ ಬಳಿ ಕೋಟಿಗಟ್ಟಲೇ ಹಣ ಮಣಗಟ್ಟಲೇ ಚಿನ್ನ ಪತ್ತೆ
ಲೋಕಾಯುಕ್ತ ಬಲೆಗೆ ಬಿದ್ದಿರುವ ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಗಂಗಾಧರಯ್ಯ ಬಳಿ ಬರೋಬರಿ ೧.೪೦ ಕೋಟಿ ನಗದು ಪತ್ತೆಯಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಗಂಗಾಧರಯ್ಯ ವಿರುದ್ಧ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಮೂರು ಸ್ಥಳಗಳಲ್ಲಿ ೧.೪೦ ಕೋಟಿ ನಗದು, ಯಲಹಂಕ, ಜೆ.ಸಿ.ನಗರ ಮತ್ತು ಹೆಬ್ಬಾಳದಲ್ಲಿ ೧೨ ಫ್ಲ್ಯಾಟ್, ನೆಲಮಂಗಲದಲ್ಲಿ ೧.೫ ಕೋಟಿ ಮೌಲ್ಯದ ೫ ಎಕರೆ ಜಮೀನು, ಮಲ್ಲೇಶ್ವರದಲ್ಲಿ ೩.೫ ಕೋಟಿ ಮೌಲ್ಯದ ನಿವೇಶನ ಹೊಂದಿರುವುದು ಪತ್ತೆಯಾಗಿದೆ. ಮನೆಯಲ್ಲಿ೧ ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.