ಲೋಕಾ ಬಲೆಗೆ ಎಇಇ

ತುಮಕೂರು, ಸೆ. ೫- ರೈತರೊಬ್ಬರ ಜಮೀನು ಪೋಡಿ ಮಾಡಲು ಪತ್ರ ನೀಡುವ ಸಂಬಂಧ ೧೫ ಸಾವಿರ ರೂ. ಲಂಚ ಪಡೆಯುತ್ತಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತುಮಕೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಬೆಳ್ಳಂಬೆಳಿಗ್ಗೆ ನಗರದ ಬನಶಂಕರಿ ಎರಡನೇ ಹಂತದಲ್ಲಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರ ಬಲೆಗೆ ಎಇಇ ಕಾಶಿ ವಿಶ್ವನಾಥ್ ಬಿದ್ದಿದ್ದಾರೆ. ಲಕ್ಷ್ಮಿನಾರಾಯಣ ಎಂಬುವರ ಒಂದು ಎಕರೆ ೭ ಗುಂಟೆ ಜಮೀನಿನಲ್ಲಿ ನಾಲ್ಕು ಗುಂಟೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಸೇರಿದೆ ಎನ್ನಲಾಗಿದ್ದು, ಇದನ್ನು ಪೋಡಿ ಮಾಡಲು ಇಲಾಖೆಯಿಂದ ಪತ್ರ ನೀಡಬೇಕಿತ್ತು. ಪತ್ರ ನೀಡಲು ಕಾಶಿ ವಿಶ್ವನಾಥ್ ವ್ಯಕ್ತಿಯೋಬ್ಬರಿಂದ ೧೫ ಸಾವಿರ ರೂ. ಲಂಚವನ್ನು ಕಚೇರಿಯಲ್ಲಿ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ವಲಿ ಬಾಷಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ಗಳಾದ ಮಂಜುನಾಥ್, ಹರೀಶ್, ಇನ್ಸ್‌ಪೆಕ್ಟರ್‌ಗಳಾದ ಸತ್ಯನಾರಾಯಣ, ಸಲೀಂ, ರಾಮರೆಡ್ಡಿ, ಶಿವರುದ್ರಪ್ಪ ಮೇಟಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. (ಪೊಟೋ-೧೮)