ಲೋಕಾ ದಾಳಿ ಸಿಕ್ಕ ಕೋಟ್ಯಾಂತರ ಹಣ ನಾವು ಸಂಪಾದಿಸಿದ್ದು ಮಾಡಾಳ್ ಸ್ಪಷ್ಟನೆ

ದಾವಣಗೆರೆ,ಮಾ.7- ಲೋಕಾಯುಕ್ತ ದಾಳಿ ನಡೆಸಿದ ವೇಳೆ ಮನೆಯಲ್ಲಿ ಸಿಕ್ಕಿರುವ ಕೋಟ್ಯಾಂತರ ಹಣವನ್ನು ನಾವು ಸಂಪಾದಿಸಿದ್ದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವೆ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು‌ ಸ್ಪಷ್ಟಪಡಿಸಿದ್ದಾರೆ.
ಪುತ್ರನ ಲಂಚ ಕೋಟ್ಯಾಂತರ ನಗದು ಪತ್ತೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಶಾಸಕ ಮಾಡಾಳ್‌ ಅವರು ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು ದೊರೆತ ಬೆನ್ನಲ್ಲೇ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಕಳೆದ ಆರು ದಿನಳಿಂದ ಅಜ್ಞಾತ ಸ್ಥಳದಲ್ಲಿದ್ದ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ದೊರೆತ ಬಳಿಕ ಹುಟ್ಟೂರು ಚನ್ನೇಶಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರನ್ನು ಬೆಂಬಲಿಗರು ತಮಟೆ ಬಾರಿಸಿ, ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಿ ಕರೆದುಕೊಂಡು ಬಂದಿದ್ದಾರೆ. ನಂತರ ವಿರೂಪಾಕ್ಷಪ್ಪ ಅವರು ಮಹದೇವಮ್ಮ ದೇವಿ ದರ್ಶನ ಪಡೆದರು. ಬಳಿಕ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬೆಂಬಲಿಗರು ಮಾಡಾಳ್ ವಿರೂಪಾಕ್ಷಪ್ಪ ಪರ ಘೋಷಣೆ ಕೂಗಿದರು.
ನಂತರ ಮಾತನಾಡಿದ ಅವರು, ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ದೊರೆತ ಹಣ ನಾವು ಸಂಪಾದನೆ ಮಾಡಿದ್ದಾಗಿದೆ ಎಂದು ಸಮರ್ಥಿಸಿಕೊಂಡರು. ಆರೋಪ ಬಂದಿದ್ದರಿಂದ ನಾನು ಜನರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ನಾನು ಎಲ್ಲೂ ಓಡಿಹೋಗಿರಲಿಲ್ಲ. ಊರಿನಲ್ಲೇ ಇದ್ದೆ ಎಂದು ಅವರು ಹೇಳಿದ್ದಾರೆ.
‘ಅಡಕೆ ತೋಟ, ಕ್ರಷರ್​​ನಿಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು ಅದು ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದೆ. ಅದನ್ನು ಅವರು ವಶಕ್ಕೆ ಪಡೆದಿದ್ದಾರೆ. ಆ ಹಣಕ್ಕೆ ನಮ್ಮ ಬಳಿ ದಾಖಲೆಯಿದೆ. ಸೂಕ್ತ ದಾಖಲೆಗಳನ್ನು ನೀಡಿ ಮತ್ತೆ ಪಡೆದುಕೊಳ್ಳುತ್ತೇವೆ. ಕೆಎಸ್​ಡಿಎಲ್​ ಅಧ್ಯಕ್ಷನಾಗಿ ನಿಯಮಬಾಹಿರ ಕೆಲಸ ಮಾಡಿಲ್ಲ. ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ಎಂದೂ ದ್ರೋಹ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳಿದ್ದಾರೆ. 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದು ಚನ್ನೇಶಪುರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ಚನ್ನಗಿರಿ ತಾಲೂಕು ಅಡಕೆ ನಾಡು, ಎಲ್ಲರ ಮನೆಯಲ್ಲೂ ಹಣವಿರುತ್ತದೆ. ಅಡಕೆ ಬೆಳೆಗಾರರ ಮನೆಯಲ್ಲಿ ಕನಿಷ್ಠ 5-6 ಕೋಟಿ ರೂ. ಹಣ ಇರುತ್ತದೆ. ನಮ್ಮ ಕುಟುಂಬಕ್ಕೆ ಸೇರಿದ 125 ಎಕರೆ ಅಡಕೆ ತೋಟವಿದೆ. 2 ಕ್ರಷರ್ ಇದೆ, ಅಡಕೆ ಮಂಡಿಯಿದೆ ಎಂದು ಮಾಡಾಳ್ ಹೇಳಿದರು.
ಲೋಕಾಯುಕ್ತಕ್ಕೆ ದೂರು ನೀಡಿದ್ದ ಶ್ರೇಯಸ್ ಕಶ್ಯಪ್​ ಹೆಸರೇ ಗೊತ್ತಿಲ್ಲ. ನಿಮ್ಮ ಬಾಯಲ್ಲೇ ಮೊದಲ ಬಾರಿಗೆ ಅವನ ಹೆಸರು ಕೇಳುತ್ತಿದ್ದೇನೆ. ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿರುವ ಹಣ ನಮ್ಮದು. ಬೆಂಗಳೂರಿನ ಮನೆಗಳಲ್ಲಿ ಸಿಕ್ಕಿರುವ ಹಣ ನಮ್ಮ ಕುಟುಂಬದ್ದು. ಅದಕ್ಕೆಲ್ಲ ದಾಖಲೆ ಇದೆ ಎಂದು ಅವರು ಹೇಳಿದರು.
‘ಯಾರೋ ಹಣದ ತಂದು ಕಚೇರಿಯಲ್ಲಿಟ್ಟರು’
ಯಾರೋ ಇಬ್ಬರು ನಮ್ಮ ಕಚೇರಿಗೆ ಹಣ ತಂದಿಟ್ಟು ಓಡಿ ಹೋದರು. ಆನಂತರ ನನ್ನ ಮಗನ ಕೈಹಿಡಿದು ಹಣದ ಮೇಲಿರಿಸಿ ವಶಕ್ಕೆ ಪಡೆದರು. ನನ್ನ ಮಗ ಪ್ರಶಾಂತ್​ ಸುಮ್ಮನೆ ಕುಳಿತಿದ್ದನ್ನು ನಾನು ಗಮನಿಸಿದ್ದೇನೆ. ಯಾರೋ ಷಡ್ಯಂತ್ರ ನಡೆಸಿ ಲೋಕಾಯುಕ್ತ ದಾಳಿಗೆ ಸಿಲುಕಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ ಎಂದು ಅವರು ಹೇಳಿದ್ದಾರೆ.
ಆಡಳಿತ ಪಕ್ಷದ ಶಾಸಕನ ಮನೆ ಮೇಲೆ ದಾಳಿ ಇತಿಹಾಸದಲ್ಲೇ ಮೊದಲು. ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ವ್ಯಕ್ತಿತ್ವದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಗೊತ್ತಿದೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿದ್ದು, ಕಳೆದ ವಾರ ಬೆಂಗಳೂರು ಜಲ ಮಂಡಳಿ ಮತ್ತು ಒಳಚರಂಡಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್‌ ಅವರ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು 40 ಲಕ್ಷ ರೂ.ಗೂ ಹೆಚ್ಚು ಮೊತ್ತದ ಲಂಚ ಪಡೆಯುತ್ತಿರುವುದು ಬಯಲಾಗಿತ್ತು. ನಂತರದಲ್ಲಿ ಶಾಸಕರ ಮನೆ ಮೇಲೂ ದಾಳಿ ನಡೆದಿದ್ದು, ಕೋಟ್ಯಂತರ ರೂ. ನಗದು, ಚಿನ್ನಾಭರಣ ದೊರೆತಿತ್ತು. ಈ ಮಧ್ಯೆ ಮಾಡಾಳ್ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರು. ಬಳಿಕ ವಕೀಲರ ಮೂಲಕ ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಜತೆಗೆ, ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್​ಐಆರ್ ರದ್ದು ಮಾಡಬೇಕು ಎಂದೂ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದರು.
ಮಾಡಾಳ್ ವಿರೂಪಾಕ್ಷಪ್ಪ ಪರ ಹಿರಿಯ ವಕೀಲ ಕೆ.ಸುಮನ್ ವಾದ ಮಂಡಿಸಿದ್ದು, ಜಾಮೀನು ನೀಡುವಂತೆ ಕೋರಿದ್ದರು. ಅವರ ವಾದವನ್ನು ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಮಧ್ಯಂತರ ಜಾಮೀನು ನೀಡಿತ್ತು. 5 ಲಕ್ಷ ರೂ. ಮೌಲ್ಯದ ಬಾಂಡ್​, ಇಬ್ಬರು ಶ್ಯೂರಿಟಿ ನೀಡುವಂತೆ ಸೂಚಿಸಿತ್ತು.