ಲೋಕಾ ಚುನಾವಣೆ ಸ್ಪರ್ಧೆಗೆ ಅವಕಾಶ-ಲೋಕೇಶ್

ಚಿಕ್ಕಬಳ್ಳಾಪುರ.ಡಿ೧೯:ಬಿಜೆಪಿಯಲ್ಲಿ ಕಳೆದ ೩೮ ವರ್ಷಗಳಿಂದ ವಿವಿಧ ಸ್ಥರಗಳಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶವನ್ನು ಕಲ್ಪಿಸಲಿದೆ ಎಂದು ಬಿಜೆಪಿ ಮುಖಂಡ ಹಾಗು ವಂದೇ ಭಾರತಂ ಫೌಂಡೇಷನ್ ಸಂಸ್ಥಾಪಕ ಬಿಜ್ಜವರ ಎಚ್.ಲೋಕೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿ ಹಾಗೂ ಸರ್ಕಾರದಲ್ಲಿ ಅಧಿಕೃತ ಪದವಿ, ಹುದ್ದೆ ಹೊಂದಿರದಿದ್ದರೂ ಪಕ್ಷದ ಪರ ವಿವಿಧ ಚುನಾವನೆಗಳ ನಿರ್ವಹಣೆ, ತಂತ್ರಜ್ಞಾನ, ಸಾರ್ವಜನಿಕ ಸಂಪರ್ಕ, ತಂತ್ರಗಾರಿಕೆ ಸೇರಿದಂತೆ ಪಕ್ಷ ಸೂಚಿಸಿರುವ ಎಲ್ಲಾ ಕಾರ್ಯಗಳನ್ನೂ ಯಶಸ್ವಿಯಾಗಿ ನಿರ್ವಹಿಸಿರುವ ಹೆಮ್ಮೆ ನನಗಿದೆ ಎಂದು ಹೇಳಿದರು.
ಪಕ್ಷ ಸಂಘಟನೆ ಮತ್ತು ಸಮಾಜ ಸೇವೆ ಜೊತೆಗೆ ಉದ್ಯಮಿಯಾಗಿಯೂ ನಾನು ಗಳಿಸಿರುವ ಅನುಭವ ಮತ್ತು ಪರಿಣಿತಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ರೇರೇಪಣೆ ನೀಡಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸೇರಿ ಪಕ್ಷದ ಅನೇಕ ಹಿರಿಯರ ಬೆಂಬಲ ನನಗಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರೆಯುತ್ತದೆ ಎಂಬ ವಿಶ್ವಾಸವಿದೆ. ೩೮ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೂ ಚುನಾವಣಾ ರಾಜಕೀಯಕ್ಕೆ ಏಕೆ ಬರಲಿಲ್ಲ ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. ಈಗ ಎಲ್ಲಾ ಸಿದ್ದತೆಯೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ ಎಂದರು.
ಪಕ್ಷದ ಸಂಘಟನೆಯ ಜೊತೆಗೆ ವಂದೇ ಭಾರತಂ ಫೌಂಡೇಷನ್ ಮೂಲಕ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ದೇಶಕ್ಕಾಗಿ ನಾವು ಎಂಬ ಅಭಿಯಾನ ಪ್ರಾರಂಭಿಸಿದ್ದೇನೆ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಎಲ್ಲ ಸಂಸ್ಥೆ ಹಾಗು ವ್ಯಕ್ತಿಗಳಿಗೆ ಸದೃಢ-ಸಮಾನ ವೇದಿಕೆಯಾಗಿ ಸಹಯೋಗ-ಸಹಬಾಳ್ವೆಗಳಡಿ ಉತ್ತಮ ತಂತ್ರಜ್ಞಾನ ಹಾಗು ವಿಧಾನಗಳನ್ನು ಬಳಸಿ ಪರಿಸರ ಹಾಗು ರೈತರಿಗೆ ಸಂಬಂಧಿಸಿದ ಸಮಸ್ಯೆಗಳಷ್ಟೇ, ಅಲ್ಲದೆ ಸಮಾಜದ ಎಲ್ಲಾ ಪಿಡುಗುಗಳಿಗೆ ಮೂಲದಲ್ಲೇ ಪರಿಹಾರ ಕಂಡುಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ರವೀಶ್, ರಂಗಹನುಮಯ್ಯ ಇದ್ದರು.