ಕೋಲಾರ,ಜೂ,೧೭-ಕಂದಾಯ ಇಲಾಖೆ, ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಭ್ರಷ್ಟಾಚಾರದಿಂದ ರೈತರು-ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಇದರಿಂದಾಗಿ ಬಡವರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಡಕುಂಟಾಗಿದೆ ಎಂದು ಲೋಕಾಯುಕ್ತ ಎಸ್ಪಿ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಪಂನಲ್ಲಿ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಸಬೂಬು ಮತ್ತು ವಿಳಂಭಕ್ಕೂ ಇಲಾಖಾ ತನಿಖೆಗೆ ಲೋಕಾಯುಕ್ತದಿಂದ ಆದೇಶ ಹೊರಡಿಸಲಾಗುವುದೆಂದು ಎಚ್ಚರಿಸಿದರು.
ಕಂಪ್ಯೂಟರ್ ಆಪರೇಟರ್ ಫಹಣಿಯಲ್ಲಿ ತಪ್ಪಾಗಿ ನಮೂದು ಮಾಡಿದರೆ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಎಸಿ ಕಚೇರಿ ಮುಂದೆ ಕೇಸ್ ಹಾಕಿಸಿ ವರ್ಷಗಟ್ಟಲೆ ಓಡಾಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗುತ್ತದೆ. ತಪ್ಪು ಮಾಡಿದ ಆಪರೇಟರ್ ಮತ್ತು ಅಧಿಕಾರಿಗಳಿಗೆ ಶಿಕ್ಷೆ ಆದಾಗ ಮಾತ್ರ ವ್ಯವಸ್ಥೆ ಸರಿಹೋಗುತ್ತದೆ. ಕಚೇರಿಗಳಲ್ಲಿ ಕಡತ ಮಿಸ್ಸಿಂಗ್ ಆದರೆ ರೈತರಿಗೆ ಶಿಕ್ಷೆ ನೀಡುವುದು ಎಷ್ಟು ಸರಿ? ದಾಖಲೆ ಕಳೆದು ಹಾಕಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗುಡುಗಿದರು.
೬ ವರ್ಷ ಆದರೂ ಅರ್ಜಿ ವಿಲೇವಾರಿ ಆಗಲ್ಲ, ಮೂರು ತಲೆಮಾರು ಆದರೂ ದಾಖಲೆ ಸಿಕ್ಕಲ್ಲ ಎಂದರೆ ಹೇಗೆ ಅರ್ಜಿ ವಿಲೇವಾರಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯವಾಗಿದ್ದು ಸಕಾಲದಲ್ಲಿ ಅರ್ಜಿ ವಿಲೇವಾರಿ ಆಗದಿದ್ದಾಗ ಅನಗತ್ಯವಾಗಿ ಕಡತವನ್ನು ಮುಕ್ತಾಯಗೊಳಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ನೇರವಾಗಿ ಕೆಲಸ ಮಾಡಲ್ಲ ಎಂದು ಹೇಳುವುದಿಲ್ಲವಾದರೂ ಸಾರ್ವಜನಿಕರ ಪರದಾಟ ಮಾತ್ರ ನಿಂತಿಲ್ಲ ಎಂದು ಲೋಕಾ ಎಸ್ಪಿ ಉಮೇಶ್ ಅವರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅರ್ಜಿದಾರರನ್ನು ಸತಾಯಿಸಲಾಗುತ್ತಿದ್ದು ಸಣ್ಣ-ಪುಟ್ಟ ಟೆಕ್ನಿಕಲ್ ಅಡೆತಡೆಗಳನ್ನು ನಿವಾರಿಸಿ ಅರ್ಜಿ ವಿಲೇವಾರಿ ಮಾಡುವುದು ರಾಕೆಟ್ ಸೈನ್ಸ್ ಅಲ್ಲ. ವಿಳಂಬದ ಉದ್ದೇಶ ಎಲ್ಲರಿಗೂ ಗೊತ್ತಿದ್ದು ಜನ ಜಾಗೃತರಾಗಿರುವುದರಿಂದಾಗಿ ನೀವು ಖೆಡ್ಡಾಕ್ಕೆ ಬೀಳುತ್ತಿರಿ. ಆಗ ಪೆನ್‌ಷನ್ ಸಹಾ ಸಿಕ್ಕಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಕಿವಿಮಾತು ಹೇಳಿದರು.
ಲೋಕಾ ಡಿಎಸ್ಪಿ ಸೂರ್ಯ ನಾರಾಯಣರಾವ್, ಇನ್ಸ್‌ಪೆಕ್ಟರ್‌ಗಳಾದ ರೇಣುಕಾ, ಯಶವಂತಕುಮಾರ್, ಆಂಜಿನಪ್ಪ, ಇಒ ಮುನಿಯಪ್ಪ ಇದ್ದರು.