ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ವಿವಿಧ ಕಚೇರಿಗಳಿಗೆ ಭೇಟಿ-ಪರಿಶೀಲನೆ

ವಿಜಯಪುರ:ಜೂ.10: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಶುಕ್ರವಾರ ನಗರದ ಉಪ ನೋಂದಣಿ ಕಚೇರಿ, ಪಶುಪಾಲನಾ ಇಲಾಖೆ ಎನಿಮಲ್ ಬರ್ತ ಕಂಟ್ರೋಲ್ ಸೆಂಟರ್‍ಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಕಚೇರಿ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹೈಟೆಕ್ ಪಂಚಕರ್ಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸರ್ಕಾರದಿಂದ 3 ಕೋಟಿ ಖರ್ಚು ಮಾಡಿ ಕಟ್ಟಡ ನಿರ್ಮಿಸಿದರೂ ಸಹ ಯಾವುದೇ ವೈದ್ಯಾಧಿಕಾರಿ, ಸಿಬ್ಬಂದಿ, ತಂತ್ರಜ್ಞರ ನೇಮಕವಾಗದೇ ಸರ್ಕಾರದ ಹಣ ವ್ಯಯಿಸಿ ಇದರ ಲಾಭ ಸಾರ್ವಜನಿಕರಿಗೆ ದೊರೆಯದೇ ಇರುವುದರಿಂದ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸುವುದಾಗಿ ಎಂದು ಅವರು ಹೇಳಿದರು.
ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೋಧನಾ ಪ್ರಮಾಣ ಪತ್ರ (ಇಸಿ) ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಸಾರ್ವಜನಿಕರು ಎಲ್ಲ ತಮ್ಮ ಕಾರ್ಯಗಳನ್ನು ಬಿಟ್ಟು, ಸರ್ಕಾರಿ ಕಚೇರಿಗಳಿಗೆ ಬಂದಾಗ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ಶೋಧನಾ ಪ್ರಮಾಣ ಪತ್ರ ಸೇರಿದಂತೆ ಯಾವುದೇ ಕಾಗದಪತ್ರಗಳನ್ನು ನೀಡಲು ಕ್ರಮ ವಹಿಸಬೇಕು. ಶೋಧನಾ ಪ್ರಮಾಣ ಪತ್ರ ನೀಡಲು ಆನ್‍ಲೈನ್ ಅರ್ಜಿ ಸಲ್ಲಿಸಿ, ಬಾಂಡ್‍ರೈಟರ್ ಬಳಿಗೆ ಹೋಗಿ ಅರ್ಜಿ ಸಲ್ಲಿಸಿ ಎಂದು ವಿಳಂಬ ಮಾಡದೇ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಸರಾಗವಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವಂತೆ ಕ್ರಮ ವಹಿಸಬೇಕು. ಕಚೇರಿಯನ್ನು ಆಧುನಿಕರಗೊಳಿಸಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಂತೆ ಅವರು ಸೂಚನೆ ನೀಡಿದರು.
ಎನಿಮಲ್ ಬರ್ತ ಕಂಟ್ರೋಲ್ ಸೆಂಟರ್‍ಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ಕೇಂದ್ರದಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ನಗರದಲ್ಲಿ ನಾಯಿಗಳನ್ನು ಕೇಂದ್ರಕ್ಕೆ ತಂದು ಶಸ್ತ್ರ ಚಿಕಿತ್ಸೆ ನೀಡಿ, ನಾಲ್ಕು ದಿನ ಆರೈಕೆ ಮಾಡಿ, ರ್ಯಾಬಿಸ್ ಲಸಿಕೆ ನೀಡುವ ಅಚ್ಚುಕಟ್ಟು ನಿರ್ವಹಣೆ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಕೇಂದ್ರದ ಪಶು ವೈದ್ಯಾಧಿಕಾರಿ ಡಾ.ಆನಂದ ನಾವದಗಿ ಅವರು ಮಾತನಾಡಿ, ನಗರದಲ್ಲಿ ಪ್ರತಿ ದಿನ 20 ನಾಯಿಗಳ ಗುರಿಯಂತೆ ಒಟ್ಟು ವರ್ಷದಲ್ಲಿ 5500 ರಿಂದ 6000 ನಾಯಿಗಳಿಗೆ ಸಂತಾನ ಶಸ್ತ್ರ ಚಿಕಿತ್ಸೆ ಗುರಿ ಹೊಂದಲಾಗಿದೆ. ಈ ಕೇಂದ್ರದಿಂದ ಸುಮಾರು 600 ನಾಯಿಗಳ ಶಸ್ತ್ರ ಚಿಕಿತ್ಸೆಗೊಳಪಡಿಸಿ ರ್ಯಾಬಿಸ್ ಲಸಿಕೆ ನೀಡಿ, ಮತ್ತೆ ಅದೇ ಜಾಗದಲ್ಲಿ ಬಿಡಲಾಗಿದೆ. ಕರ್ನಾಟಕದಲ್ಲಿಯೇ ವಿಜಯಪುರ ಕೇಂದ್ರ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್.ಪಿ. ಶ್ರೀಮತಿ ಅನಿತಾ ಹದ್ದನ್ನವರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಶು ಸಂಗೋಪನಾ ಉಪನಿರ್ದೇಶಕ ಎ.ಎಸ್.ಘೊಣಸಗಿ, ಪರಿಸರ ಅಭಿಯಂತರ ಅಶೋಕ ಸಜ್ಜನ, ಜಿಲ್ಲಾ ನೊಂದಣಾಧಿಕಾರಿ ಜಿ.ಆರ್.ನಾಡಗೌಡ, ಹಿರಿಯ ಉಪ ನೊಂದಣಾಧಿಕಾರಿ ಬಿ.ಎಸ್.ಬಿರಾದಾರ, ಲೋಕಾಯುಕ್ತ ಡಿವೈಎಸ್‍ಪಿ ಅರುಣ ನಾಯಕ, ಸಿಪಿಐ ಆನಂದ ಟಕ್ಕಣ್ಣವರ, ಆನಂದ ಡೋಣಿ ಹಾಗೂ ಇತರರು ಉಪಸ್ಥಿತರಿದ್ದರು.