ಲೋಕಾಯುಕ್ತ ನಿರ್ಜೀವಗೊಳಿಸಿದವರಿಂದ ಪಾಠಕಲಿಯುವ ಅಗತ್ಯವಿಲ್ಲ

ದಾವಣಗೆರೆ.ನ.೧೮; ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಲೂಟಿ ಮಾಡುವ ಉದ್ದೇಶದಿಂದ ಲೋಕಾಯುಕ್ತವನ್ನು ನಿರ್ಜೀವಗೊಳಿಸಿ, ಹಲ್ಲು ಕಿತ್ತ ಹಾವಿನಂತೆ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಿಯಂತ್ರಣ ಮಾಡುವ ಸದ್ದುದೇಶದಿಂದ ಲೋಕಾಯುಕ್ತಕ್ಕೆ ಮರು ಜೀವ ನೀಡಿ, ಹೆಚ್ಚಿನ ಅಧಿಕಾರ ನೀಡಿದೆ. ಹೀಗಾಗಿ ಭ್ರಷ್ಟ ಅಧಿಕಾರಿಗಳು ಬಲೆಗೆ ಬೀಳುತ್ತಿದ್ದಾರೆ. ಇದರ ಪರಿಜ್ಞಾನವಿಲ್ಲದ ಕಾಂಗ್ರೆಸ್ ಪಕ್ಷದ ಕೆಲವರು ನಗರಪಾಲಿಕೆಯ ವ್ಯವಸ್ಥಾಪಕ ವೆಂಕಟೇಶ್ ಲೋಕಾಯುಕ್ತರ ಬಲೆಗೆ ಬಿದ್ದಿರುವುದನ್ನು ನೆಪಮಾಡಿಕೊಂಡು ಲೋಕಸಭಾ ಸದಸ್ಯರಾದ ಜಿ ಎಂ ಸಿದ್ದೇಶ್ವರರವರ ಮತ್ತು ಜಿಲ್ಲಾ ಸಚಿವರಾದ ಬೈರತಿ ಬಸವರಾಜರವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಸವರಿದಂತಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಲೋಕಸಭಾ ಸದಸ್ಯರಾದ ಜಿ ಎಂ ಸಿದ್ದೇಶ್ವರರವರು ಆಗರ್ಭ ಶ್ರೀಮಂತರಾದರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ. ಆಗಿದ್ದಾಂಗೆ ದಾವಣಗೆರೆ ನಗರದಲ್ಲಿ ಸಂಚರಿಸಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡುವುದನ್ನು ಜನ ಕಂಡಿದ್ದಾರೆ. ಭ್ರಷ್ಟತೆ ಎಂದರೇನು ಎಂಬುದೇ ಅವರಿಗೆ ಗೊತ್ತಿಲ್ಲ. ಕೇಂದ್ರ-ರಾಜ್ಯ ಸರ್ಕಾರಗಳಿಂದ ಅನುದಾನ ತಂದು ಶರ ವೇಗದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡುತ್ತಿದ್ದಾರೆ.ಜಿಲ್ಲಾ ಸಚಿವರಾದ ಬೈರತಿ ಬಸವರಾಜರವರು ಅತ್ಯಂತ ಸರಳ ವ್ಯಕ್ತಿ. ಸಮಯಕ್ಕೆ ಸರಿಯಾಗಿ ಹಾಜರಾಗುವ ಶಿಸ್ತಿನ ಸಚಿವರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರುಗಳನ್ನು ಅವರ ಪಕ್ಷದ ಕಾರ್ಯಕರ್ತರೆ ಮಧ್ಯಾಹ್ನ 12 ಗಂಟೆಯವರೆಗೆ ಕಾದು ಭೇಟಿ ಮಾಡಬೇಕು. ಇಂತಹವರಿಗೆ ಸರಳತೆ ಸಜ್ಜನಿಕೆ ಶಬ್ದಗಳ ಗಂದ ಗಾಳಿಯು ಗೊತ್ತಿಲ್ಲ. ಭ್ರಷ್ಟತೆಯಲ್ಲಿ ದುಡ್ಡು ಮಾಡುವ ಶೂರರಿವರು. ಇಂತಹವರಿಗೆ ಜಿ ಎಂ ಸಿದ್ದೇಶ್ವರವರ ಮತ್ತು ಬೈರತಿ ಬಸವರಾಜರವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು  ಹೇಳಿದ್ದಾರೆ.