ಲೋಕಾಯುಕ್ತ ದಾಳಿ 4 ಲಕ್ಷ ಲಂಚ ಪಡೆದ ಬಿಬಿಎಂಪಿಯ ಜಂಟಿ ಆಯುಕ್ತ ಶ್ರೀನಿವಾಸ್‌ ಸೆರೆ

ಬೆಂಗಳೂರು,ಸೆ.12- ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ನೀಡಿದ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಂಟಿ ಆಯುಕ್ತ ಶ್ರೀನಿವಾಸ್‌ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ.
ದಾಳಿಯ ವೇಳೆ 4 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್‌ ಮತ್ತು ಅವರ ಆಪ್ತ ಸಹಾಯಕ ಉಮೇಶ್‌ರನ್ನು ಪೊಲೀಸರು ಬಂಧಿಸಲಾಗಿದೆ.
ಈ ಮೂಲಕ ರಾಜ್ಯದಲ್ಲಿ ನೆಪ ಮಾತ್ರಕ್ಕೆ ಇದ್ದ ಲೋಕಾಯುಕ್ತ ಮತ್ತೆ ಅಬ್ಬರಿಸಲು ಸಜ್ಜಾಗಿದೆ ಎಂಬ ಸಂದೇಶ ಈ ದಾಳಿಯಿಂದ ರವಾನಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರವನ್ನು ಕಿತ್ತುಕೊಂಡು ಭ್ರಷ್ಟಾಚಾರ ನಿಗ್ರಹ ದಳ ಆರಂಭಿಸಲಾಗಿತ್ತು. ಆದರೆ ಲೋಕಾಯುಕ್ತ ಕಾಯ್ದೆಯಷ್ಟು ಬಲವಿಲ್ಲ ಎಸಿಬಿಯಿಂದ ಭ್ರಷ್ಟಾಚಾರದ ನಿಗ್ರಹ ಸಾಧ್ಯವಾಗಲಿಲ್ಲ ಎಂಬ ಆರೋಪ ಬಿಜೆಪಿ ಮತ್ತು ಜೆಡಿಎಸ್‌ನಿಂದ ಕೇಳಿ ಬಂದಿತ್ತು. ಇದೀಗ ಮತ್ತೆ ಅಧಿಕಾರ ಸಿಗುತ್ತಲೇ ದಾಳಿ ಮಾಡುವ ಮೂಲಕ ಭ್ರಷ್ಟರ ಬೇಟೆಗೆ ಲೋಕಾಯುಕ್ತ ಪೊಲೀಸರು ಸಿದ್ಧರಾಗಿದ್ದಾರೆ.
ಲೋಕಾಯುಕ್ತ ಬಲವರ್ಧನೆಯ ಬೆನ್ನಲ್ಲೇ ಇದು ಮೊದಲ ದಾಳಿತಾಗಿದ್ದು ಜಂಟಿ ಆಯುಕ್ತ ಶ್ರೀನಿವಾಸ್‌ ನಾಲ್ಕು ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. ಪಶ್ಚಿಮ ವಿಭಾಗದ ಬಿಬಿಎಂಪಿ ಕಛೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಮಾಹಿತಿ ಮೇರೆಗೆ ಲೋಕಾಯುಕ್ತ ದಾಳಿ ನಡೆದಿದೆ.
ಮಲ್ಲೇಶ್ವರಂ ಬಳಿ ಇರುವ ಬಿಬಿಎಂಪಿ ಕಛೇರಿ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಹಣದ ಸಮೇತ ನಿಂತಿದ್ದ ಶ್ರೀನಿವಾಸ್ ಪಿಎ ಉಮೇಶ್. ಖಾತೆ ಬದಲಾವಣೆ ವಿಚಾರಕ್ಕೆ ಲಂಚದ ಬೇಡಿಕೆ ಇಟ್ಟಿದ್ದ ಶ್ರೀನಿವಾಸ್‌, ಈ ಬಗ್ಗೆ ದೂರುದಾರರು ನೀಡಿದ ಮಾಹಿತಿ ಅನ್ವಯ ದಾಳಿ ನಡೆಸಲಾಗಿದೆ.
ಡಿವೈಎಸ್ ಪಿ ಮಂಜಯ್ಯ ,ಶಂಕರ್ ನಾರಾಯಣ್ ನೇತೃತ್ವದ ಲೋಕಾಯುಕ್ತ ತಂಡದಲ್ಲಿ ಒಟ್ಟು 8 ಜನ ಅಧಿಕಾರಿಗಳಿದ್ದರು ಎಂದು ಮೂಲಗಳು ತಿಳಿಸಿವೆ. ಇಷ್ಟು ದಿನಗಳ ಕಾಲ ದೂರುಗಳು ಬಂದರೂ ಏನು ಮಾಡದ ಪರಿಸ್ಥಿತಿಯಲ್ಲಿ ಲೋಕಾಯುಕ್ತ ಪೊಲೀಸರಿದ್ದರು. ಆದ ಹೈಕೋರ್ಟ್‌ ಮತ್ತು ಕರ್ನಾಟಕ ಸರ್ಕಾರದ ಆದೇಶದಿಂದ ಲೋಕಾಯುಕ್ತ ಪೊಲೀಸರಿಗೆ ಬಲ ಬಂದಿದೆ.
ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ರಚನೆಯಿಂದ ಮಂಕಾಗಿದ್ದ ಲೋಕಾಯುಕ್ತ ಸಂಸ್ಥೆ, ಈಗ ಎಸಿಬಿ ರದ್ದು ಮಾಡುವ ಹೈಕೋರ್ಚ್‌ ಆದೇಶ ಹಾಗೂ ಅದಕ್ಕೆ ಸರ್ಕಾರದ ಪೂರಕ ಸ್ಪಂದನೆ ದೊರಕಿದ ಕಾರಣ ಚುರುಕುಗೊಂಡಿದೆ. ತಮ್ಮ ಹಿಂದಿನ ಶೈಲಿಯಂತೆ ಲಂಚಗುಳಿತನದ ವಿರುದ್ಧ ಸಮರಕ್ಕೆ ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದು, ‘ಭ್ರಷ್ಟರ ವಿರುದ್ಧ ಜನರ ದೂರು ಸ್ವೀಕರಿಸಿ ತನಿಖೆ ನಡೆಸಿ’ ಎಂದು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಅವರು ಆಯಾ ಜಿಲ್ಲಾ ವ್ಯಾಪ್ತಿಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ‘ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿ ಹೈಕೋರ್ಚ್‌ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಸಂಬಂಧ ಜನರು ಸಲ್ಲಿಸುವ ದೂರುಗಳನ್ನು ಸ್ವೀಕರಿಸಿ ತನಿಖೆ ನಡೆಸಬೇಕು’ ಎಂದು ಅವರು ಲೋಕಾಯುಕ್ತ ವಿಭಾಗದ ವಿವಿಧ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಎಡಿಜಿಪಿ ಅವರು ಸುತ್ತೋಲೆಯಲ್ಲಿ ನಿರ್ದೇಶಿಸಿದ್ದಾರೆ.