ಲೋಕಾಯುಕ್ತ ದಾಳಿ, ಪೊಲೀಸ್ ಪೇದೆ ಹಾಗೂ ಡ್ರೈವರ್ ವಶಕ್ಕೆ

ಕಲಬುರಗಿ,ಸೆ.22:ಮರಳು ಸಾಗಣೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ ಲಂಚದ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಪೊಲೀಸ್ ಪೇದೆ ಹಾಗೂ ಡ್ರೈವರ್
ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಜೇವರ್ಗಿಯಲ್ಲಿ ನಡೆದಿದೆ.

ಜೇವರ್ಗಿ ಪೊಲೀಸ್ ಠಾಣೆಯ ಪೇದೆ ಶಿವರಾಯ ಹಾಗೂ ಡ್ರೈವರ್ ಅವ್ವಣ್ಣ ಲೋಕಾಯುಕ್ತರು ಬೀಸಿದ ದಾಳಿಗೆ ಸಿಕ್ಕಿಬಿದ್ದವರು‌. ಜೇವರ್ಗಿಯ ಪೊಲೀಸ್ ವಸತಿ ಗೃಹದಲ್ಲಿ ಪೇದೆ ಶಿವರಾಯ ಹಾಗೂ ಚಾಲಕ ಅವ್ವಣ್ಣ ವ್ಯವಹಾರ ಕುದುರಿಸುತ್ತಿದ್ದರು. ಈ ಕುರಿತು ಅಖಿಲ್ ಶಹಾಪುರ ಎಂಬಾತ ನೀಡಿದ ಖಚಿತ ಸುಳಿವಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣ ಸಮೇತ ಪೇದೆ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಮರಳು ವಿಲೇವಾರಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ದೂರುದಾರ ಅಖಿಲ್ ಎಂಬಾತನಿಂದ ಲಂಚದ ವ್ಯವಹಾರ ಕುದುರಿಸಿಕೊಳ್ಳಲಾಗಿತ್ತು. ಹಾಗಾಗಿ, ಡೀಲ್ ಪ್ರಕಾರ ಹಣ ತಲುಪಿಸಲು ಜೇವರ್ಗಿ ಪೊಲೀಸ್ ಠಾಣೆ ಹಿಂಭಾಗದ ಪೊಲೀಸ್ ವಸತಿ ಗೃಹದ ಬಳಿ ಬರುವಂತೆ ಅಖಿಲ್ ಅವರಿಗೆ ಶಿವರಾಯ ಮತ್ತು ಅವ್ವಣ್ಣ ಸೂಚನೆ ನೀಡಿದ್ದರು. ಈ ಕುರಿತು ಅಖಿಲ್ ಲೋಕಾಯುಕ್ತ ಅಧಿಕಾರಿಗಳಿಗೆ ಖಚಿತ ಮಾಹಿತಿ ರವಾನಿಸಿದ್ದರು. ಈ ಮಾಹಿತಿಯ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಸೇರಿದಂತೆ ಪೊಲೀಸ್ ಇನ್ಸ್ ಪೆಕ್ಟರ್ ಧ್ರುವತಾರೆ, ಅಕ್ಕಮಹಾದೇವಿ, ನಾನಾಗೌಡ ಹಾಗೂ ಸಿಬ್ಬಂದಿಗಳಾದ ಪ್ರದೀಪ್ ಮತ್ತು ಸಿದ್ದಲಿಂಗ ದಾಳಿ ನಡೆಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿನಿಮಿಯ ರೀತಿಯಲ್ಲಿ ಬಂಧನ:ಬಂಧಿತ ಜೇವರ್ಗಿ ಪೊಲೀಸ್ ಠಾಣೆಯ ಪೇದೆ ಶಿವರಾಯ ಲೋಕಾಯುಕ್ತ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಹಣ ಸಮೇತ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿನಿಮೀಯ ರೀತಿಯಲ್ಲಿ ಲೋಕಾಯುಕ್ತ ಪೊಲೀಸರು ಆತನ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಇಬ್ಬರೂ ಆರೋಪಿಗಳನ್ನು ಜೇವರ್ಗಿ ಹೊರವಲಯದ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೆ ಒಳಪಡಿಸಿ ನಂತರ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಯಿತು.