ಲೋಕಾಯುಕ್ತ ಅಧಿಕಾರಿಗಳೆದುರು ಸಾರ್ವಜನಿಕರ ಅಹವಾಲುಗಳ ಮಹಾಪೂರ

ಬ್ಯಾಡಗಿ,ಆ6: ತಾಲೂಕು ಕಚೇರಿಗೆ ಬಂದರೆ… ಕಡತಗಳು ಸಿಗುತ್ತವೆ ಎಂಬ ಗ್ಯಾರೆಂಟಿನೇ ಇಲ್ಲ…!! ಹಿಂದೊಮ್ಮೆ ಅರ್ಜಿ ಹಾಕಿದ ಕಡತಗಳೇ ನಾಪತ್ತೆ..!! ತಮ್ಮ ಕೆಲಸಕ್ಕೆಂದು ತಾಲೂಕು ಕಚೇರಿಗೆ ತೆರಳಿದರೆ ಕಡತಗಳು ಇಲ್ಲಾ ಎನ್ನುವ ಸಿಬ್ಬಂದಿಯ ಮಾತಿಗೆ ಸಾರ್ವಜನಿಕರು ಗೋಳಾಡುವಂತಾಗಿದೆ.
ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯಲ್ಲಿ ತಾಲೂಕಿನ ಕೆಲವು ರೈತರು ಅಕ್ರಮ-ಸಕ್ರಮ ಯೋಜನೆಯಡಿ ಸಲ್ಲಿಸಿದ ಅರ್ಜಿಗಳ ಕಡತಗಳೇ ನಾಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೈತರು ತಮ್ಮ ಜಮೀನುಗಳ ಉತಾರ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆಯಲು ದಿನನಿತ್ಯ ತಾಲೂಕು ಕಚೇರಿಗೆ ಉದ್ಯೋಗವನ್ನು ಬಿಟ್ಟು ಅಲೆದಾಡುವಂತಾಗಿದೆ ಎಂದು ಅಧಿಕಾರಿಗಳ ಮುಂದೆ ತಮ್ಮ ಗೋಳನ್ನು ತೋಡಿಕೊಂಡರು.
ರೈತರ ಸಮಸ್ಯೆಗಳ ಬಗ್ಗೆ ಸ್ಪಂದಿಸಿದ ದಾವಣಗೆರೆ ವಿಭಾಗದ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಕಡತಗಳ ನಾಪತ್ತೆ ಬಗ್ಗೆ ತಹಶೀಲ್ದಾರ ಹಾಗೂ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಾಲೂಕು ಕಚೇರಿಗೆ ತಮ್ಮ ಕೆಲಸಕ್ಕೆ ಎಂದು ಬರುವ ಜನರನ್ನು ಸೌಜನ್ಯದಿಂದ ಕಾಣುವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸಿ, ಕೆಲಸದಲ್ಲಿ ಬೇಜವಾಬ್ದಾರಿಯನ್ನು ತೋರುವ ಅಧಿಕಾರಿಗಳೇ ತಪ್ಪಿಗೆ ನೇರ ಹೊಣೆಗಾರರೆಂದು ಎಚ್ಚರಿಸಿದರು.
ಡಿವೈಎಸ್ಪಿ ಚಂದ್ರಶೇಖರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿ, ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಗುಣಮಟ್ಟದ ಪೂರಕ ಪೌಷ್ಟಿಕ ಆಹಾರದ ಪೂರೈಕೆ ಆಗುತ್ತಿರುವುದು ಕಂಡು ಬಂದಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಡಿಯಲ್ಲಿ ವಿತರಿಸುವ ಆಹಾರ ಮತ್ತು ಧಾನ್ಯಗಳ ಬಗ್ಗೆ ನಿಗಾ ವಹಿಸಬೇಕು. ಪ್ರತಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿರಿ ಎಂದು ಸಿಡಿಪಿಓ ಅವರಿಗೆ ಸೂಚಿಸಿದರು.
ಅಲ್ಲದೇ ರೈತ ವಿದ್ಯಾನಿಧಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕೃಷಿ ಹಾಗೂ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಕೈಗೊಂಡು ಅವುಗಳ ಉಪಯೋಗ ತಲುಪುವಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರಲ್ಲದೇ, ಜಿಂಕೆಗಳ ಹಾವಳಿಯಿಂದ ರೈತರು ತಮ್ಮ ಹೊಲದಲ್ಲಿ ಬೆಳೆಗಳನ್ನು ಕಳೆದುಕೊಳ್ಳುತ್ತಿರುವ ದೂರನ್ನು ಪರಿಶೀಲಿಸಿ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಸಿಪಿಐ ಯು.ಎಸ್.ಆವಟೆ, ತಹಶೀಲ್ದಾರ ತಿಪ್ಪೇಸ್ವಾಮಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಲೋಕಾಯುಕ್ತ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.