ಲೋಕಾಯಕ್ತ ಹಳೆ ಪ್ರಕರಣಗಳವಿಲೇವಾರಿಗೆ ಕ್ರಮ: ಎಸ್ಪಿ ಸೈಮನ್

ಮಂಗಳೂರು, ಎ.೧೪- ಲೋಕಾಯುಕ್ತದಲ್ಲಿ ಬಾಕಿಯಾಗಿರುವ ಎಲ್ಲಾ ಹಳೆಯ ಪ್ರಕರಣಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಲೋಕಾಯುಕ್ತ ವಿಭಾಗದ ಎಸ್‌ಪಿ ಸೈಮನ್ ಸಿಎ ತಿಳಿಸಿದ್ದಾರೆ.
ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಆಲಿಸಿದ ಬಳಿಕ ಅವರು ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ೨೦೧೬ರಿಂದ ಕೆಲವು ಪ್ರಕರಣಗಳು ಬಾಕಿ ಇವೆ. ಅದಕ್ಕೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಾಗಿದೆ. ಇಂತಹ ಪ್ರಕರಣಗಳ ಫಾಲೋಅಪ್ ಜತೆಗೆ ಹೊಸ ಪ್ರಕರಣಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ. ಬೇರೆ ಕೆಲವು ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಸಾರ್ವಜನಿಕರು ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಹಿಂಜರಿಯುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ತಾಲೂಕಿನಲ್ಲಿ ತಿಂಗಳ ಎರಡನೇ ಬುಧವಾರ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಪೋನ್ ಇನ್ ಕಾರ್ಯಕ್ರಮ ಕೂಡ ನಿರಂತರವಾಗಿ ನಡೆಯುತ್ತಿದೆ. ಸಾರ್ವಜನಿಕರು ನೇರವಾಗಿ ಲೋಕಾಯುಕ್ತ ಕಚೇರಿಗೆ ದೂರು ನೀಡಬಹುದು. ದೂರವಾಣಿ ಮೂಲಕವೂ ಸಂಪರ್ಕಿಸಬಹುದು. ಚುನಾವಣಾ ದಿನಗಳಲ್ಲಿಯೂ ಲೋಕಾಯುಕ್ತ ಸಾಮಾನ್ಯ ದಿನಗಳಂತೆಯೇ ಕೆಲಸ ನಿರ್ವಹಿಸುತ್ತದೆ ಎಂದು ಸೈಮನ್ ಸಿಎ ತಿಳಿಸಿದರು. ಇಂದಿನ ಜನಸಂಪರ್ಕ ಸಭೆಯಲ್ಲಿ ೪ ದೂರುಗಳು ಬಂದಿವೆ. ಇನ್ನು ಕೆಲವು ವಿಚಾರಗಳ ಬಗ್ಗೆ ಮೌಖಿಕವಾಗಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಒಂದು ದೂರನ್ನು ಇತ್ಯರ್ಥಪಡಿಸಲಾಗಿದೆ. ಒಂದು ದೂರನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು. ಇನ್ನೆರೆಡು ದೂರುಗಳ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಲೋಕಾಯುಕ್ತ ಎಸ್ಪಿ ತಿಳಿಸಿದರು. ಕಳೆದ ೪ ತಿಂಗಳಲ್ಲಿ ದ.ಕ ಜಿಲ್ಲೆಯಲ್ಲಿ ೪೦ ಹಾಗೂ ಉಡುಪಿ ಜಿಲ್ಲೆಯಲ್ಲಿ ೨೦ ಜನಸಂಪರ್ಕ ಸಭೆ ನಡೆಸಲಾಗಿದೆ. ಜನಸಂಪರ್ಕ ಸಭೆಗಳ ಮೂಲಕ, ನೇರವಾಗಿ ಕಚೇರಿ ಸಂಪರ್ಕಿಸಿ ನೀಡಿರುವ ದೂರುಗಳ ಸಹಿತ ೨೦೦ ಕ್ಕೂ ಅಧಿಕ ದೂರುಗಳು ದಾಖಲಾಗಿವೆ. ಅದರಲ್ಲಿ ಸುಮಾರು ಶೇ.೮೦ರಷ್ಟು ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು. ಡಿವೈಎಸ್ಪಿಗಳಾದ ಚೆಲುವರಾಜು, ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ವಿನಾಯಕ ಬಿಲ್ಲವ ಉಪಸ್ಥಿತರಿದ್ದರು.