ಲೋಕಸಭೆ ಚುನಾವಣೆ: ಮುಖಂಡ ಚಂದ್ರಾಸಿಂಗ್ ಬೆಂಬಲಿಗರ ಸಭೆಗೌರವದಿಂದ ಆಹ್ವಾನಿಸಿದರೆ ಕಾಂಗ್ರೆಸ್ ಸೇರ್ಪಡೆ

ಬೀದರ್:ಏ.4: ಗೌರವದಿಂದ ಆಹ್ವಾನಿಸಿದರೆ ಮಾತ್ರ ಕಾಂಗ್ರೆಸಗೆ ಮರು ಸೇರ್ಪಡೆಯಾಗಲು ಸಿದ್ಧ ಎಂದು ಬೀದರ್ ದಕ್ಷಿಣ ಕ್ಷೇತ್ರದ ಮುಖಂಡ ಚಂದ್ರಾಸಿಂಗ್ ಅವರ ಬೆಂಬಲಿಗರು ಗುರುವಾರ ಇಲ್ಲಿ ಹೇಳಿದರು.
ನಗರದ ಕೈಲಾಶ ಶೋ ರೂಂ ಹಿಂದುಗಡೆಯ ಚಂದ್ರಾಸಿಂಗ್ ನಿವಾಸದಲ್ಲಿ ಚಂದ್ರಾಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೆಂಬಲಿಗರು, ಮುಖಂಡರು ಹಾಗೂ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ನಡೆದುಕೊಳ್ಳುವುದಾದರೆ ಕಾಂಗ್ರೆಸ್ ಸೇರಲು ತಮ್ಮದೇನೂ ಅಭ್ಯಂತರ ಇಲ್ಲ ಎಂದರು.
ಚಂದ್ರಾಸಿಂಗ್ ಅವರು 14 ವರ್ಷ ಬೀದರ್ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಬಲಪಡಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಬೇಕಾಯಿತು. ಬೆಂಬಲಿಗರು ಕಾಂಗ್ರೆಸ್ ತೊರೆದು ಅವರನ್ನು ಬೆಂಬಲಿಸಿದೇವು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರು ತಮ್ಮ ಭಾವನೆಗೆ ಸ್ಪಂದಿಸಲು ತಯಾರಿದ್ದರೆ ಮತ್ತೆ ಕಾಂಗ್ರೆಸಗೆ ಸೇರ್ಪಡೆಯಾಗಲಿದ್ದೇವೆ. ಇಲ್ಲವಾದಲ್ಲಿ ಏಪ್ರಿಲ್ 11 ರಂದು ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಬಲಿಗರ ಸಭೆ ನಡೆಸಲಾಗಿದೆ. ಯಾರನ್ನು ಬೆಂಬಲಿಸಬೇಕು ಎನ್ನುವ ಬಗ್ಗೆ ಚರ್ಚಿಸಲಾಗಿದೆ. ಬೆಂಬಲಿಗರ ಒಕ್ಕೊರಲ ಅಭಿಪ್ರಾಯದ ಆಧಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಚಂದ್ರಾಸಿಂಗ್ ತಿಳಿಸಿದರು.
ಪ್ರಮುಖರಾದ ಯುಸೂಫ್ ಅಲಿ ಜಮಾದಾರ್, ನಾರಾಯಣರಾವ್ ಭಂಗಿ, ಪ್ರಭುರಾವ್ ಬದಗಲ್, ಶ್ರೀನಿವಾಸ್ ರೆಡ್ಡಿ ಧರ್ಮಾಪುರ, ಲಕ್ಷ್ಮಿಕಾಂತ್ ಪರೀಟ್, ಗೌಸೊದ್ದಿನ್ ಕಮಠಾಣ, ಶ್ರೀನಿವಾಸ್ ರೆಡ್ಡಿ ಹೊಕ್ರಾಣ, ಲಕ್ಷ್ಮಣರಾವ್ ಸಾತನೂರ, ಮಾರುತಿ ಮಾಸ್ಟರ್ ಸೇರಿದಂತೆ ಚಂದ್ರಾಸಿಂಗ್ ಅವರ ನೂರಾರು ಬೆಂಬಲಿಗರು ಪಾಲ್ಗೊಂಡಿದ್ದರು.