ಪಾಟ್ನಾ,ಜು.೩೧- ಇಂಡಿಯಾ ಮೈತ್ರಿಕೂಟದ ಎದುರು ೨೦೨೪ರ ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ನಿರ್ನಾಮವಾಗಲಿದೆ ಎಂದು ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ.
ದೇಶದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷಗಳ ಎಲ್ಲರೂ ಭಿನ್ನಭಿಪ್ರಾಯ ಬಿಟ್ಟು ದೇಶಕ್ಕಾಗಿ ಹೋರಾಡುವಂತೆ ಮನವಿ ಮಾಡಿದ್ದಾರೆ.
ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ನಿವಾಸದಲ್ಲಿ ಆಯೋಜಿಸಿದ್ದ ಆರ್‍ಜೆಡಿ ವಿದ್ಯಾರ್ಥಿ ಘಟಕದ ಒಂದು ದಿನದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬಿಜೆಪಿ ಮತ್ತು ನರೇಂದ್ರ ಮೋದಿ ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂಬೈನಲ್ಲಿ ಕಾರ್ಯತಂತ್ರ:
“ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವ ಪಕ್ಷಗಳು ಒಗ್ಗೂಡುತ್ತಿವೆ. ಈ ಮೂಲಕ ದೇಶದಲ್ಲಿ ಬಿಜೆಪಿ ನಿರ್ನಾಮವಾಗಲಿದೆ. ಮುಂಬರುವ ದಿನಗಳಲ್ಲಿ (ಐಎನ್‌ಡಿಐಎ ಮೈತ್ರಿಕೂಟ) ಮಹಾರಾಷ್ಟ್ರದಲ್ಲಿ ಸಭೆ ನಡೆಸಲಿದ್ದೇವೆ, ಅಲ್ಲಿ ನಾವು ಮುಂದಿನ ಕಾರ್ಯತಂತ್ರವನ್ನು ಅಂತಿಮಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟ ಕಾಂಗ್ರೆಸ್ ಸೇರಿದಂತೆ ೨೬ ವಿರೋಧ ಪಕ್ಷಗಳ ಗುಂಪು. ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಎದುರಿಸಲು ಮತ್ತು ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಮೂರನೇ ಬಾರಿಗೆ ಸತತವಾಗಿ ಗೆಲ್ಲುವುದನ್ನು ತಡೆಯಲು ವಿರೋಧ ಪಕ್ಷಗಳು ಒಗ್ಗೂಡಿವೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಜೂನ್ ೨೩ ರಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮೊದಲ ಸಭೆ ನಡೆದಿತ್ತು. ಎರಡನೇ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ ೧೭ ಮತ್ತು ೧೮ ರಂದು ಕಾಂಗ್ರೆಸ್ ನಡೆಸಿತು. ಮುಂದಿನ ಸಭೆ ಮುಂಬೈನಲ್ಲಿ ನಡೆಯಲಿದೆ.
ಪ್ರಧಾನಿಗೆ ಚಿಂತೆ
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸೋಲುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತಿತರಾಗಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಹೀಗಾಗಿಯೇ ಅವರು ?ತ ವಿದೇಶದಲ್ಲಿ ಆಶ್ರಯವನ್ನು ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.