ಲೋಕಸಭೆ ಚುನಾವಣೆ: ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇರಲಿ: ವೆಚ್ಚ ವೀಕ್ಷಕ ಅನುಪಕುಮಾರ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.14 :ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡುವ ಕಾರ್ಯವಾಗಬೇಕು ಎಂದು ವಿಜಯಪುರ ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕÀ ಐ.ಆರ್.ಎಸ್ ಅಧಿಕಾರಿ ಅನುಪಕುಮಾರ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಚುನಾವಣೆಯಾದರೂ ಕೂಡ ನಿರ್ಲಕ್ಷಿಸುವಂತಿಲ್ಲ. ವಿದಾನಸಭೆ ಚುನಾವಣೆಯಂತೆಯೇ ಲೋಕಸಭಾ ಚುನಾವಣೆಯನ್ನು ಕೂಡಾ ಅಷ್ಟೇ ಗಂಭೀರವಾಗಿ ಪರಿಗಣಿಸಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಬ್ಯಾಂಕುಗಳಲ್ಲಿ ಹೊಸ ಖಾತೆಗಳನ್ನು ತೆರೆಯಲಾಗುತ್ತಿದೆಯಾ ಎಂದು ಪರಿಶೀಲಿಸಿ ಮತ್ತು ಆ ಖಾತೆಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾಗುತ್ತಿದೆಯಾ ಎಂಬುದನ್ನು ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು, ಚೆಕ್ ಪೋಸ್ಟ್‍ಗಳಲ್ಲಿ ಕಾಟಾಚಾರಕ್ಕೆ ಮಾಡಿದಂತೆ ತಪಾಸಣೆಯಾಗಬಾರದು. ಕಟ್ಟು ನಿಟ್ಟಾಗಿ ಪರಿಶೀಲಿಸುವದರೊಂದಿಗೆ ಸಾರ್ವಜನಿಕರಿಗೆ ತೊಂದೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಮದ್ಯದಂಗಡಿಗಳಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಮಟ್ಟದ ಸಾರಾಯಿ ಮಾರಾಟವಾದಲ್ಲಿ ತಕ್ಷಣ ಗಮನಕ್ಕೆ ತರಬೇಕು. ಮಹಾರಾಷ್ಟ್ರ ರಾಜ್ಯಕ್ಕೆ ಗಡಿಭಾಗ ಜಿಲ್ಲೆಯಾಗಿರುವುದರಿಂದ ಅಬಕಾರಿ ಇಲಾಖಾ ಅಧಿಕಾರಿ ಕಟ್ಟು ನಿಟ್ಟಾಗಿ ಕೆಲಸ ನಿರ್ವಹಿಸಿ, ಅಲ್ಲದೇ ಪ್ರಿಂಟಿಂಗ್ ಪ್ರೆಸ್‍ಗಳ ಮೇಲೆ ಕೂಡಾ ನಿಗಾ ಇಡುವುದು ಅವಶ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಲೋಕಸಭಾ ಚುನಾವಣೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಜನವರಿ 22 ರಂದು ಹೊರಡಿಸಲಾದ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 19,19,048 ಮತದಾರರಿದ್ದು, ಈ ಪೈಕಿ 9,76,073 ಪುರುಷ, 9,42,757 ಮಹಿಳಾ ಹಾಗೂ 218 ತೃತೀಯ ಲಿಂಗ ಮತದಾರಿರುತ್ತಾರೆ, ಗ್ರಾಮೀಣ ಭಾಗದಲ್ಲಿ 1507 ಹಾಗೂ ಪಟ್ಟಣ ಪ್ರದೇಶದಲ್ಲಿ 578 ಸೇರಿ ಒಟ್ಟು 2085 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸುಗಮ, ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸುವ ದೃಷ್ಟಿಯಿಂದ ಒಟ್ಟು 167 ಸೆಕ್ಟರ್ ಅಧಿಕಾರಿ, 72 ಫ್ಲಾಯಿಂಗ್ ಸ್ವ್ಯಾಡ್, 87 ಸ್ಟೆಟಿಕ್ ಸರ್ವಲೈನಸ್ ತಂಡ, 24 ವಿಡಿಯೋ ಸರ್ವಲೈನಸ್ ಹಾಗೂ 8 ವಿಡಿಯೋ ವಿವ್ಹಿಂಗ್ ತಂಡ ರಚಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಮಾತನಾಡಿ, ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿಯಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಮತ್ತು ಸೈಕಲ್ ಜಾಥಾ ಹಾಗೂ ಬೈಕ್ ರ್ಯಾಲಿ ಹಮ್ಮಿಕೊಂಡು ಜನರಲ್ಲಿ ಮತ ಚಲಾಯಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 29 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೇರಿದಂತೆ ಇತರರು ಇದ್ದರು.