ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ನಾಯಕರ ಕರೆಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಪರ ಮತ ಯಾಚನೆ

ಅಫಜಲಪುರ:ಏ.1: ಕಳೆದ ಲೋಕಸಭೆ ಚುನಾವಣೆಯಲ್ಲಿ ಕೋಲಿ ಮತ್ತು ಕುರುಬ ಸಮಾಜಕ್ಕೆ ಎಸ್.ಟಿ. ಮಾಡುವುದಾಗಿ ಸುಳ್ಳು ಭರವಸೆ ನೀಡಿ ಮತ ಪಡೆದುಕೊಂಡವರು 5 ವರ್ಷದ ಅವಧಿಯಲ್ಲಿ ಆ ಸಮಾಜಕ್ಕೆ ಯಾವುದೇ ಕೊಡಗೆ ನೀಡದೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ನಡೆದ ಅಫಜಲಪುರ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾವನಾತ್ಮಕ ವಿಷಯಗಳನ್ನು ಹೇಳಿ ಮತದಾರರ ಮತ ಕೇಳುವುದಿಲ್ಲ. ನಮ್ಮ ಅಭಿವೃದ್ಧಿ ಕೆಲಸಗಳು ಹೇಳಿ ಮತ ಕೇಳುತ್ತೇವೆ, ಬಡವರಿಗಾಗಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳು ನೀಡಿದಂತೆ ಜಾರಿಗೆ ತಂದಿದೆ. ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 10 ವರ್ಷದ ಅವಧಿಯಲ್ಲಿ ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಕೇವಲ ಸುಳ್ಳು ಹೇಳುವುದು ಬಿಜೆಪಿ ಕೆಲಸವಾಗಿದೆ. ಯಾವುದೇ ಧರ್ಮ, ಜಾತಿ ನೋಡದೆ 5 ಗ್ಯಾರಂಟಿಗಳು ಎಲ್ಲರಿಗೂ ಕೊಟ್ಟಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.ಪ್ರತಿ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ 20 ಸಾವಿರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಬಿಜೆಪಿಯವರು ಬಿಟ್ಟಿ ಭಾಗ್ಯ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ತೆರಿಗೆ ರೂಪದಲ್ಲಿ ಸಂಗ್ರಹವಾದ ಜನರ ದುಡ್ಡು ಜನರಿಗೆ ಕೊಡುವಾಗ ಈ ರೀತಿ ವ್ಯಂಗ್ಯವಾಗಿ ಹೇಳುವವರಿಗೆ ತಕ್ಕ ಪಠ ಕಲಿಸಬೇಕು. ಕಲಬುರಗಿ ಸಂಸದರಾಗಿ ಕೇವಲ ಅವರ ಮಗನ ಕ್ಷೇತ್ರ ಚಿಂಚೋಳಿಗೆ ಸೀಮಿತವಾಗಿದ್ದರೆ. ಭೀಮಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರಿಂದ ನಿರಂತರವಾಗಿ ಮುಖ್ಯಮಂತ್ರಿ, ನೀರಾವರಿ ಸಚಿವರು, ಜಿಲ್ಲಾಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚಿಸ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಆದರೆ ಸಂಸದ ಡಾ.ಉಮೇಶ ಜಾಧವ್ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ನೀರು ಹರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕುವುದರ ಬದಲು ಸತ್ಯಾಗ್ರಹ ಕುಳಿತುಕೊಂಡವರ ಬಿಪಿ ಹೇಗಿದೆ ಎಂದು ನೋಡಿದ್ದಾರೆ ಅಷ್ಟೇ. ಕಲಬುರಗಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರಿಗೆ ಹೆಚ್ಚಿನ ಮತಗಳು ಈ ಮತಕ್ಷೇತ್ರದಿಂದ ನೀಡಿ ಗೆಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಪಾಠ ಕಲಿಸಬೇಕು ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ 371(ಜೆ) ಜಾರಿಗೆ ತರಲಾಗಿದೆ. ಇದರಿಂದಾಗಿ ಪ್ರತಿ ವರ್ಷ ಒಂದು ಸಾವಿರ ವೈದ್ಯಕೀಯ ಸೀಟುಗಳು ಸಿಗುತ್ತಿವೆ. ನಯಾಪೈಸೆ ಹಣ ತೆಗೆದುಕೊಳ್ಳದೆ ಕಳೆದ ನಮ್ಮ ಸರ್ಕಾರ ಅವಧಿಯಲ್ಲಿ 30 ಸಾವಿರ ಯುವಕರಿಗೆ ಉದ್ಯೋಗ ನೀಡಿದ್ದೇವೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ್ಯಾಂತರ ಹಣ ತೆಗೆದುಕೊಂಡು ಪಿಎ??? ಹಗರಣವನ್ನು ಮಾಡಿದ್ದಾರೆ.ಹಲವು ಚುನಾವಣೆಯಲ್ಲಿ ಅಫಜಲಪುರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರಂತರವಾಗಿ ಹಿನ್ನಡೆಯಾಗಿದೆ.ಡಾ.ಮಲ್ಲಿಕಾರ್ಜುನ ಖರ್ಗೆಯವರು ಈ ಭಾಗಕ್ಕೆ ಅಭಿವೃದ್ಧಿ ಮಾಡಿದ್ದಾರೆ.
50 ವರ್ಷದ ರಾಜಕೀಯ ಜೀವನದಲ್ಲಿ ಹಲವು ಖಾತೆಗಳು ನಿಭಾಯಿಸಿದ್ದಾರೆ.ಆದರೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.
ಸಂಸದ ಡಾ.ಉಮೇಶ ಜಾಧವ ಅಭಿವೃದ್ಧಿ ಶೂನ್ಯವಾಗಿದೆ.ಜಾತಿಯ ವಿಷಬೀಜ ಬಿತ್ತಿ ಮತ ಪಡೆದುಕೊಂಡು ಲೂಟಿ ಮಾಡುವ ಕೆಲಸ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದೆ. ಹೀಗಾಗಿ ಇಡೀ ಕಲಬುರಗಿ ಜಿಲ್ಲೆಯ ಜನರು ಗಮನಿಸುತ್ತಿದ್ದಾರೆ ಈ ಬಾರಿ ಅಫಜಲಪುರ ಕ್ಷೇತ್ರ ಜನರು ಲೋಕಸಭೆ ಚುನಾವಣೆಯಲ್ಲಿ ಏನು ಮಾಡುತ್ತಾರೆ ಎಂದು ನೋಡುತ್ತಿದ್ದಾರೆ.ಹೀಗಾಗಿ ಈ ಬಾರಿಯಾದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರಿಗೆ ಹೆಚ್ಚಿನ ಮತಗಳು ನೀಡುವ ಮೂಲಕ ಗೆಲ್ಲಿಸಬೇಕು ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ,ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಮುಂದೆ ಈ ಭಾಗದ ನಾಯಕರಾಗಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿಯಾಗುವ ಯೋಗವಿದೆ.ಅಲ್ಲದೇ ತಂದೆಗೆ ತಕ್ಕ ಮಗ ಎಂಬಂತೆ ಪ್ರಿಯಾಂಕ್ ಖರ್ಗೆಗೆ ಮುಖ್ಯಮಂತ್ರಿಯಾಗುವ ಅವಕಾಶ ಇರುವುದರಿಂದ ಎಲ್ಲಾರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿಗೆ ಗೆಲ್ಲಿಸಬೇಕು.ಕೋಲಿ ಸಮಾಜಕ್ಕೆ ಸಂಸದ ಡಾ.ಉಮೇಶ ಜಾಧವ್ ಮೋಸ ಮಾಡಿದ್ದಾರೆ.ಎಸ್.ಟಿ ಮಾಡುವುದಾಗಿ ಸುಳ್ಳು ಹೇಳಿ ನನಗೆ ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಹೋಗಿ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ.ಹೀಗಾಗಿ ಮತ್ತೆ ಮರಳಿ ನನ್ನ ಮನೆಗೆ ಬಂದಿದ್ದೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳು ನೀಡುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ರೇವೂನಾಯಕ್ ಬೆಳಮಗಿ, ಶರಣಪ್ಪ ಮಟ್ಟೂರ, ಬಾಬುರಾವ್ ಚಿಂಚನಸೂರ, ಚಂದ್ರಶೇಖರ ಪಾಟೀಲ್ ಹುಮನಾಬಾದ್,ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ್,ಪಪ್ಪು ಪಟೇಲ್,ಜೆ.ಎಂ.ಕೊರಬು, ಜಗದೇವ ಗುತ್ತೇದಾರ್,ಮತೀನ ಪಟೇಲ್,ಪ್ರಕಾಶ್ ಜಮಾದಾರ, ರಮೇಶ್ ಪೂಜಾರಿ, ಮಶಾಕ್ ಪಟೇಲ್,ಶರಣು ಕುಂಬಾರ, ಶಿವಾನಂದ ಗಾಡಿ ಸಾಹುಕಾರ, ಮಹೆಬೂಬ ಪಟೇಲ್, ಎಸ್.ಎಸ್ ಪಾಟೀಲ್
ಸುರೇಶ್ ತಿಬಶೆಟ್ಟಿ, ಕೇಶವ ಮೋಟಗಿ,ಜ್ಯೋತಿ ಮರಗೋಳ್, ಜ್ಞಾನೇಶ್ವರಿ ಪಾಟೀಲ್, ಅಸ್ಪಕ್ ಬಂದರವಾಡ ಅನೇಕರು ಉಪಸ್ಥಿತರಿದ್ದರು.


ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಅಫಜಲಪುರ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಅವರಿಗೆ ಹೆಚ್ಚಿನ ಮತಗಳು ನೀಡಲಾಗುವುದು.ಬಿಜೆಪಿ ಸಂಸದರು ಕಳೆದ 5 ವರ್ಷದ ಅವಧಿಯಲ್ಲಿ ಅಫಜಲಪುರ ಮತಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕೊಡುಗೆ ನೀಡಿಲ್ಲ.ಹೀಗಾಗಿ ಅವರಿಗೆ ತಕ್ಕಪಾಠ ಕಲಿಸಬೇಕಾಗಿದೆ.
-ಎಂ.ವೈ.ಪಾಟೀಲ್ ಶಾಸಕರು ಅಫಜಲಪುರ.


ಕೋಲಿ ಸಮಾಜಕ್ಕೆ ಎಸ್.ಟಿ ಮಾಡುವುದಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಹೇಳಿ ಉಮೇಶ್ ಜಾಧವ್ ಮತ ಪಡೆದುಕೊಂಡು ಕೋಲಿ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ.ಈ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಬೇಕು.ಡಾ.ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಬೇಕಾದರೆ ರಾಧಾಕೃಷ್ಣ ದೊಡ್ಮನಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು.
-ತಿಪ್ಪಣಪ್ಪ ಕಮಕನೂರ,ವಿಧಾನ ಪರಿಷತ್ ಸದಸ್ಯರು