ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ರೂವಾರಿಗಳಾಗಿ : ಚನ್ನಬಸವನಗೌಡ ಕರೆ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಫೆ23: ಪಕ್ಷ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಜತೆಗೆ ಬಿಜೆಪಿಯನ್ನು  ಬೇರು ಮಟ್ಟದಿಂದ ಬಲಪಡಿಸಬೇಕು. ಈ ಮೂಲಕ ಮುಂಬರುವ ಲೋಕಸಭೆ, ಜಿ.ಪಂ., ತಾ.ಪಂ. ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಗೆಲುವಿನ ರೂವಾರಿಗಳಾಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ  ಚನ್ನಬಸವನಗೌಡ ಪಾಟೀಲ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು.
ಹೊಸಪೇಟೆ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಹೊಸಪೇಟೆ ಮಂಡಲ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪಕ್ಷ ಸಂಘಟನೆಯ ದೃಷ್ಟಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ನೂತನ ಮಂಡಲ ಅಧ್ಯಕ್ಷರು ಮತ್ತು ತಂಡದ ಮೇಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಮೋದಿ ಅವರನ್ನು ಪುನಃ ಪ್ರಧಾನಿಯಾಗಿಸಬೇಕು. ಇದು ಪಕ್ಷದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಬಿಜೆಪಿ ಚುನಾವಣಾ ಪ್ರನಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಶ್ರೀರಾಮ ಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ವಾಗ್ದಾನವನ್ನು ಈಡೇರಿಸಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಜೊತೆಗೆ ಕಾಂಗ್ರೆಸ್ ವೈಫಲ್ಯಗಳನ್ನೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಚುನಾವಣೆಯಲ್ಲಿ ಕೊಂಚ ಎಡವಿದರೂ ದೇಶ 25 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ ಎಂದು ಚನ್ನಬಸವಗೌಡ ಪಾಟೀಲ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ ಸಿಂಗ್ ಮಾತನಾಡಿ, ಮೋದಿಯನ್ನು ವಿರೋಧಿಸುವ ಏಕೈಕ ಕಾರಣದಿಂದ ಅಸ್ಥಿತ್ವಕ್ಕೆ ಬಂದಿದ್ದ ಐಎನ್‍ಡಿಐಎ ವಿಪಕ್ಷಗಳ ಒಕ್ಕೂಟ ದಿನೇ ದಿನೇ ಸೊರಗುತ್ತಿದೆ. ಪ್ರಾದೇಶಿಕ ಪಕ್ಷಗಳೂ ಕೈಕೊಡುವುದರಿಂದ ಕಾಂಗ್ರೆಸ್ ಏಕಾಂಗಿಯಾಗುತ್ತಿದೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಐದು ಗ್ಯಾರೆಂಟಿ ನೆಪದಲ್ಲಿ ಘೋಷಿಸಿದ ಬಿಟ್ಟಿ ಭಾಗ್ಯಗಳಿಂದಾಗಿ ರಾಜ್ಯ ದಿವಾಳಿಯಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದೊಂದು ದಿನ ಪಾಕಿಸ್ಥಾನ, ಶ್ರೀಲಂಕಾ ಸಾಲಿಗೆ ಭಾರತ ಸೇರುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಎಂದರು.
ನೂತನ ಮಂಡಲ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ವೇದಿಕೆ ಮೇಲೆ ಎಸ್ ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತ, ಒಬಿಸಿ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷ ಎ. ಲತಾ, ಸದಸ್ಯರಾದ ಪ್ರಮುಖರಾದ ಅಶೋಕ ಜೀರೆ, ಪಕ್ಷದ ಹಿರಿಯರಾದ ಜಂಬಯ್ಯ ನಾಯಕ, ಕಸಾಟ್ಟಿ ಉಮಾಪತಿ, ಬಸವರಾಜ ನಾಲವತ್ವಾಡ, ಸಾಲಿ ಸಿದ್ದಯ್ಯ ಸ್ವಾಮಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಬಳಿ ಹಣವಿಲ್ಲದೇ, ಪರಿಶಿಷ್ಟ ಜಾತಿ ಮತ್ತು ಪಂಗಡದ 11.5 ಸಾವಿರ ಕೋಟಿ ರೂ. ಅನುದಾನವನ್ನು ಇತರೆ ಉದ್ದೇಶಗಳಿಗೆ ಡೈವರ್ಟ್ ಮಾಡಿದೆ. ಇದರಿಂದ ದಲಿತ ಸಮುದಾಯಕ್ಕೆ ಅನ್ಯಾಯವಾಗಲಿದೆ. ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ಹೊಸಪೇಟೆಯ ಪುನೀತ್ ಸರ್ಕಲ್‍ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
ಚನ್ನಬಸವನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ.