ಲೋಕಸಭೆ ಚುನಾವಣೆಯಲ್ಲಿ ಡಾ. ನಾಯಿಕಗೆ ಐಎಂಎ ಬೆಂಬಲ

ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.4 :ಇಲ್ಲಿನ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಡಾ. ಬಾಬುರಾಜೇಂದ್ರ ನಾಯಿಕ್ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ
ಭಾರತೀಯ ವೈದ್ಯಕೀಯ ಸಂಘವು ತನ್ನ ನಿರ್ಧಾರವನ್ನು ಪ್ರಕಟಿಸಿದೆ.
ಸಂಘವು ಡಾ ಬಾಬು ರಾಜೇಂದ್ರ ನಾಯಿಕ್ ಅವರನ್ನು ಬೆಂಬಲಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರ ಅಭೂತಪೂರ್ವ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎಂಎ ವಿಜಯಪುರ ಐಎಂಎ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ ಅವರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ವೈದ್ಯರಿಗೆ ಐಎಂಎ ಬೆಂಬಲ ನೀಡಿ, ಅವರ ಗೆಲುವಿಗಾಗಿ ಶ್ರಮಿಸಲಿದೆ ಎಂದರು.
ವಿಜಯಪುರ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ, ಭಾಜಪ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿರುವ ಡಾ. ಬಾಬುರಾಜೇಂದ್ರ ನಾಯಿಕ್ ಅವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಅತ್ಯಂತ ಭರವಸೆ ಮೂಡಿಸುವ ಏಕೈಕ ವೈದ್ಯರಾಗಿದ್ದು, ಬಹುತೇಕ ವೈದ್ಯರು ಡಾ. ಬಾಬುರಾಜೇಂದ್ರ ನಾಯಿಕ್ ಅವರನ್ನು ಹೃದಯಪೂರ್ವಕವಾಗಿ ಬೆಂಬಲಿಸುತ್ತಾರೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ಡಾ. ಬಾಬುರಾಜೇಂದ್ರ ನಾಯಿಕ್ ಅವರು ಕೈಗೊಂಡ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದ ಡಾ. ಬಿರಾದಾರ್, ಕೋವಿಡ್ ಸಮಯದಲ್ಲಿ ಡಾ. ನಾಯಿಕ್ ಅವರಂತಹವರು ಜನರ ಪಾಲಿಗೆ ವರದಾನದಂತೆ ಆಗಮಿಸಿದ್ದು, ಕೋವಿಡ್ ಬಾಧಿತರಿಗೆ ಆರೈಕೆ ಮತ್ತು ಪರಿಹಾರ ಒದಗಿಸಲು ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ಶ್ರೀ ತುಳಸಿಗಿರೀಶ ಫೌಂಡೇಶನ್ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಜನರನ್ನು ತಲುಪಲು ಮತ್ತು ಅಗತ್ಯ ಉಳ್ಳವರಿಗೆ ಸಹಾಯ ಮಾಡಲು ಡಾ. ಬಾಬುರಾಜೇಂದ್ರ ನಾಯಿಕ್ ಅವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ವಿಜಯಪುರದ ಐಎಂಎ ಕಾರ್ಯದರ್ಶಿ ಡಾ.ದಯಾನಂದ ಹೇಳಿದರು.
ಅನ್ನ ದಾಸೋಹದ ರೀತಿಯಲ್ಲೇ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಅವರು ನಡೆಸುತ್ತಿರುವ ಆರೋಗ್ಯ ದಾಸೋಹ ಯೋಜನೆ ಶ್ಲಾಘನೀಯವಾಗಿದ್ದು, ಲೋಕಸಭಾ ಅಭ್ಯರ್ಥಿಯಾಗಿ ಡಾ.ಬಾಬು ರಾಜೇಂದ್ರ ನಾಯಿಕ್ ಅವರನ್ನು ಬೆಂಬಲಿಸುವ ಅಗತ್ಯವನ್ನು ನಾವು ಮನಗಂಡಿದ್ದೇವೆ ಎಂದು ಅವರು ಹೇಳಿದರು.
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿರುವ ಐಎಂಎ ಸದಸ್ಯರಾದ ಎಲ್ಲ ವೈದ್ಯರೂ ಡಾ. ಬಾಬುರಾಜೇಂದ್ರ ನಾಯಿಕ್ ಅವರ ಗೆಲುವನ್ನು ಖಚಿತಪಡಿಸಲು ಶ್ರಮಿಸಲಿದ್ದಾರೆ ಎಂದು ಅವರು ಹೇಳಿದರು.
ಡಾ. ಬಾಬುರಾಜೇಂದ್ರ ನಾಯಿಕ್ ಅವರ ಪತ್ನಿ ಡಾ. ಶೀತಲ ನಾಯಿಕ್ ಅವರೂ ಓರ್ವ ಪ್ರಮುಖ ಹೃದ್ರೋಗ ತಜ್ಞರಾಗಿದ್ದು, ನಿರಂತರವಾಗಿ ಸಮಾಜ ಸೇವೆ ನಡೆಸುತ್ತಾ, ಪತಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ಡಾ. ಬಾಬುರಾಜೇಂದ್ರ ನಾಯಿಕ್ ಅವರಿಗೆ ಬೆಂಬಲ ನೀಡುವುದು ನಮಗೂ ಹೆಮ್ಮೆ ಮತ್ತು ಗೌರವದ ವಿಚಾರವಾಗಿದೆ ಎಂದು ಡಾ. ಸುರೇಶ ಹೇಳಿದರು.
ಡಾ ಕಿರಣ ಓಸ್ವಾಲ್,
ಡಾ ಸಂತೋಷ್ ನೇಮಗೌಡ, ಡಾ ಸುನಿಲ್ ಕಲ್ಲೂರ, ಡಾ ಬಾಬು ಕಟ್ಟಿಮನಿ, ಡಾ ಹೀರಾ ಗೋಸಾವಿ, ಡಾ ಅಶೋಕ ಬಿರಾದಾರ, ಡಾ ಗಿರೀಶ ಪಾಟೀಲ, ಡಾ ವೆಂಕಟೇಶ ಪಾಟೀಲ್, ಡಾ ಶೀತಲ್ ಹಾಗೂ ಇತರರು ಉಪಸ್ಥಿತರಿದ್ದರು