ಲೋಕಸಭೆಯಲ್ಲಿ ಕರಪತ್ರ, ನಾಮಫಲಕ ನಿಷೇಧ

ನವದೆಹಲಿ, ಜು. ೧೬- ಸಂಸತ್ತಿನ ಮುಂಗಾರು ಅಧಿವೇಶನದ ಸೋಮವಾರದಿಂದ ಆರಂಭವಾಗಲಿದ್ದು ಸದನದಲ್ಲಿ ಯಾವುದೇ ಕರಪತ್ರಗಳು, ನಾಮಫಲಕ ಹಂಚುವುದನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿಯ ಸಾಹಿತ್ಯ, ಪ್ರಶ್ನಾವಳಿ, ಕರಪತ್ರಗಳು, ಪತ್ರಿಕಾ ಟಿಪ್ಪಣಿಗಳು, ಕರಪತ್ರಗಳು ಅಥವಾ ಮುದ್ರಿತ ಅಥವಾ ಯಾವುದೇ ವಿಷಯವನ್ನು ಸ್ಪೀಕರ್ ಅವರ ಪೂರ್ವಾನುಮತಿಯಿಲ್ಲದೆ ಹಂಚಬಾರದು. ಸದನ ಮತ್ತು ಸಂಸತ್ ಭವನದ ಸಂಕೀರ್ಣದ ಒಳಗೆ ಫಲಕಗಳನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಉಭಯ ಸದನಗಳಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸುವ ಸಾಧ್ಯತೆಗಳಿವೆ.
ಸಂಸತ್ತಿನ ಸಂಕೀರ್ಣದೊಳಗೆ ಪ್ರತಿಭಟನೆಗಳು ಮತ್ತು ಧರಣಿಗಳನ್ನು ನಡೆಸಲು ಅನುಮತಿ ನೀಡದಿರುವ ಬಗ್ಗೆ ವಿರೋಧ ಪಕ್ಷಗಳು ಭಾರಿ ಕೋಲಾಹಲ ಎಬ್ಬಿಸಲು ಸಜ್ಜುಗೊಂಡಿವೆ.
“ಸದಸ್ಯರು ಯಾವುದೇ ಪ್ರದರ್ಶನ, ಧರಣಿ ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭವನ್ನು ನಡೆಸುವ ಉದ್ದೇಶಕ್ಕಾಗಿ ಸದನದ ಆವರಣವನ್ನು ಬಳಸುವಂತಿಲ್ಲ” ಎಂದು ಸಂಸದರಿಗೆ ಸಲಹೆ ನೀಡಲಾಗಿದೆ. ಇದೂ ಕೂಡ ವಿರೋಧ ಪಕ್ಷಗಳ ಸದಸ್ಯರನ್ನು ಕೆರಳಿಸಿದೆ.
ಈ ಹಿಂದೆ ವಿರೋಧ ಪಕ್ಷದ ಸದಸ್ಯರು ತಮ್ಮ ಆಸನಗಳಿಂದ ಸದನದ ಬಾವಿಯೊಳಗೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಉಭಯ ಸದನಗಳಲ್ಲಿ ಪ್ರತಿಭಟನೆ ,ಕಾಗದ ಪತ್ರ ಹರಿದು ಹಾಕಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ ಅನೇಕ ನಿದರ್ಶನಗಳಿವೆ. ಇದಕ್ಕೆ ಕಡಿವಾಣ ಹಾಕಲು ಸಚಿವಾಲಯ ಮುಂದಾಗಿದೆ.
ರಾಜ್ಯಸಭೆಯಲ್ಲಿ ಇತ್ತೀಚಿನ ಕೆಲವು ಅಧಿವೇಶನಗಳಲ್ಲಿ ಸಂಸತ್ತಿನ ಸದಸ್ಯರು ಕಲಾಪಗಳ ಉದ್ದಕ್ಕೂ ಫಲಕಗಳನ್ನು ಹಿಡಿದುಕೊಂಡು ಕೆಲವು ಸಂದರ್ಭಗಳಲ್ಲಿ ಫಲಕಗಳು ಮತ್ತು ಕರಪತ್ರಗಳನ್ನು ಹರಿದು ಕುರ್ಚಿಯ ಮೇಲೆ ಎಸೆದ ದೃಶ್ಯಗಳಿಗೆ ಸಾಕ್ಷಿಯಾಗಿತ್ತು.
ಸಂಸತ್ತಿನಲ್ಲಿ ಯಾವುದೇ ಧರಣಿಗೆ ಅವಕಾಶ ನೀಡುವುದಿಲ್ಲ ಎಂಬ ಹೇಳಿಕೆಗೆ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
“ಸದನದ ಆವರಣವನ್ನು ಯಾವುದೇ ಪ್ರದರ್ಶನ, ಧರಣಿ ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭ ನಡೆಸುವ ಉದ್ದೇಶಕ್ಕಾಗಿ ಸದಸ್ಯರು ಬಳಸುವಂತಿಲ್ಲ. ಸದಸ್ಯರ ಸಹಕಾರವನ್ನು ಕೋರಲಾಗಿದೆ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಸೇರಿದಂತೆ ಹಲವಾರು ಸಂಸತ್ ಸದಸ್ಯರು ಟ್ವಿಟರ್‌ನಲ್ಲಿ ಈ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಆದಾಗ್ಯೂ, ಇಂತಹ ಸುತ್ತೋಲೆಯನ್ನು ಹೊರತರುತ್ತಿರುವುದು ಇದೇ ಮೊದಲಲ್ಲ ಎಂದು ತೋರಿಸಲು ಹಲವಾರು ದಾಖಲೆಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಾಕಲಾಗಿದೆ.
“ಯುಪಿಎ ಆಡಳಿತಾವಧಿಯಲ್ಲಿ ಹೊರಡಿಸಲಾದ ಇಂತಹ ಹಲವು ಸುತ್ತೋಲೆಗಳು ಸಾರ್ವಜನಿಕ ಡೊಮೇನ್‌ನಲ್ಲಿವೆ. ಅವುಗಳಲ್ಲಿ ೨೦೧೩ ರಡಿಸೆಂಬರ್ ೨,ರಂದು ಮತ್ತು ಎರಡನೆಯದನ್ನು ೨೦೧೪ ರ ಫೆಬ್ರವರಿ ೩, ರಂದು ಹೊರತರಲಾಗಿದೆ” ಎಂದು ಮೂಲಗಳು ತಿಳಿಸಿವೆ.