ಲೋಕಸಭೆಗೆ ನುಗ್ಗಿದ ಆಗಂತುಕರು

ಆಗಂತುಕರ ವಶ

ನವದೆಹಲಿ,ಡಿ.೧೩:ದೇಶದ ಪ್ರಜಾಪ್ರಭುತ್ವ ದೇಗುಲವಾದ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಲೋಕಸಭೆಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರೇಕ್ಷಕರ ಗ್ಯಾಲರಿಯಿಂದ ಏಕಾಏಕಿ ಸದನಕ್ಕೆ ಧುಮುಕಿ ಅಶ್ರುವಾಯು ಮಾದರಿಯ (ಟಿಯರ್) ಅನಿಲ ಇದ್ದ ಕ್ಯಾನ್‌ಗಳನ್ನು ಸಿಡಿಸಿದ ಆಘಾತಕಾರಿ ಘಟನೆ ನಡೆದಿದ್ದು, ಇದರಿಂದ ಲೋಕಸಭೆಯ ಒಳಗೆ ಅಯೋಮಯ ಪರಿಸ್ಥಿತಿ ಸೃಷ್ಟಿಯಾಗಿ ಸದನವನ್ನು ಮುಂದೂಡಲಾಯಿತು.
ಈ ಘಟನೆಯಿಂದ ಸಂಸತ್ ಸದಸ್ಯರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಹೊಸ ಸಂಸತ್ ಭವನದಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳಿದ್ದರೂ ಭದ್ರತಾ ಲೋಪ ವ್ಯಕ್ತವಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
೨೨ ವರ್ಷಗಳ ಹಿಂದೆ ರಾಜಧಾನಿ ದೆಹಲಿಯ ಸಂಸತ್ ಭವನದ ಮೇಲೆ ಭಯೋತ್ಪಾದಕರು ಗುಂಡಿನ ಸುರಿಮಳೆಗರೆದು ವಿಧ್ವಂಸಕ ಕೃತ್ಯ ನಡೆಸಿದ ಘಟನೆ ಸಂಭವಿಸಿತ್ತು. ಈ ದಾಳಿ ನಡೆದು ೨೨ನೇ ವರ್ಷಾಚರಣೆ ನಡೆಯುತ್ತಿರುವ ಸಂದರ್ಭದಲ್ಲೇ ಅಪರಿಚಿತರಿಬ್ಬರು ಕಲಾಪ ನಡೆಯುತ್ತಿದ್ದ ವೇಳೆ ಲೋಕಸಭೆಯ ಸದನಕ್ಕೆ ಹಠಾತ್ತನೆ ನುಗ್ಗಿರುವ ಘಟನೆ ಆತಂಕಕ್ಕೆಡೆ ಮಾಡಿಕೊಟ್ಟಿದೆ. ಈ ಘಟನೆ ಸಂಭವಿಸುತ್ತಿದ್ದಂತೆಯೇ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದ್ದಾರೆ.
ಮೂಲಗಳ ಪ್ರಕಾರ ಸಂಸದ ಪ್ರತಾಪ್‌ಸಿಂಹ ಅವರ ಹೆಸರಿನಲ್ಲಿ ಸಾಗರ್ ಎಂಬುವವರು ಪಾಸ್ ಪಡೆದಿದ್ದು, ಮತ್ತೊಬ್ಬರ ಹೆಸರು ಸದ್ಯಕ್ಕೆ ಲಭ್ಯವಾಗಿಲ್ಲ. ಸದನದ ಒಳಗೆ ಧುಮುಕಿರುವ ಈ ಇಬ್ಬರು ಮೊದಲು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕಲಾಪ ವೀಕ್ಷಿಸುತ್ತಿದ್ದರು. ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಧುಮುಕಿದ್ದು, ಸದನಗಳ ಬೆಂಚ್‌ಗಳ ಮೇಜುಗಳ ಮೇಲೆ ಓಡಾಡಿದ್ದಾರೆ. ಇವರಿಬ್ಬರು ಅಶ್ರುವಾಯು ಡಬ್ಬಿಗಳನ್ನು ಸದನದ ಒಳಗೆ ಎಸೆದರು. ಇದರಿಂದ ಸದನದಲ್ಲಿ ಅಶ್ರುವಾಯು ತುಂಬಿಕೊಂಡಿತ್ತು, ಇದರ ನಡುವೆ ಒಬ್ಬ ಸಭಾಧ್ಯಕರ ಪೀಠದತ್ತ ನುಗ್ಗಲು ಪ್ರಯತ್ನ ನಡೆಸಿದ್ದು, ತಕ್ಷಣವೇ ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿದ್ದು, ಗದ್ದಲದಿಂದ ಏನು ಘೋಷಣೆ ಕೂಗಿದರು ಎಂಬುದು ಕೇಳಿಸಿಲ್ಲ.
ಅಧೀರ್‌ರಂಜನ್ ಚೌಧರಿ ಹೇಳಿಕೆ
ಸಂಸತ್ತಿನ ಒಳಗೆ ಇಂದು ನಡೆದ ಘಟನೆ ಬಗ್ಗೆ ಮಾತನಾಡಿರುವ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್‌ರಂಜನ್ ಚೌಧರಿ ಇಂದು ಸಂಸತ್ ಕಲಾಪ ನಡೆಯುತ್ತಿರುವಾಗಲೇ ಇಬ್ಬರು ಅಪರಿಚಿತರು ಗ್ಯಾಲರಿಯಿಂದ ಸದನಕ್ಕೆ ಜಿಗಿದು ಗ್ಯಾಸ್ ಹೊರಸೂಸುವ ವಸ್ತುವನ್ನು ಎಸೆದರು ಅವರನ್ನು ಸಂಸದರು ಹಿಡಿದರು. ಆಮೇಲೆ ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು ಎಂದು ಹೇಳಿದ್ದಾರೆ. ಇದು ಖಂಡಿತವಾಗಿಯೂ ಭದ್ರತಾಲೋಪವಾಗಿದೆ ಎಂದು ಅವರು ತಿಳಿಸಿದ್ದಾರೆ.
ಡ್ಯಾನಿಶ್‌ಅಲಿ ಹೇಳಿಕೆ
ಲೋಕಸಭೆಯ ಒಳಗೆ ಪ್ರವೇಶಿಸಿದ ವ್ಯಕ್ತಿಯ ಹೆಸರು ಸಾಗರ್ ಎಂದು ಬಿಎಸ್ಪಿಯಿಂದ ಅಮಾನತ್ತಾಗಿರುವ ಸಂಸದ ಡ್ಯಾನಿಶ್‌ಅಲಿ ಮಾಹಿತಿ ನೀಡಿದ್ದು, ಈ ವ್ಯಕ್ತಿ ಮೈಸೂರಿನ ಸಂಸದರ ಹೆಸರಿನಲ್ಲಿ ಪಾಸ್ ಪಡೆದು ಕಲಾಪ ವೀಕ್ಷಣೆಗೆ ಬಂದಿದ್ದರು ಎಂದು ಡ್ಯಾನಿಶ್‌ಅಲಿ ಖಾಸಗಿ ಸುದ್ದಿವಾಹಿನಿಗೆ ಹೇಳಿದ್ದಾರೆ.
ಸದನಕ್ಕೆ ಬರುವ ಸಂದರ್ಶಕರಿಗಾಗಲಿ ವರದಿಗಾರರಿಗಾಗಲಿ ಟ್ಯಾಗ್ ಇಲ್ಲ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಇದು ಸಂಪೂರ್ಣ ಭದ್ರತಾ ಲೋಪ ಎಂದು ನಾನು ಭಾವಿಸುತ್ತೇನೆ. ಲೋಕಸಭೆಯ ಒಳಗೆ ಏನು ಬೇಕಾದರು ಆಗುತ್ತಿತ್ತು ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್‌ಯಾದವ್ ಆತಂಕ ವ್ಯಕ್ತಪಡಿಸಿದರು.
ಡಿ.ಕೆ.ಸು ಹೇಳಿಕೆ
ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಏಕಾಏಕಿ ಲೋಕಸಭೆಯ ಅಂಗಳಕ್ಕೆ ಜಿಗಿದಿದ್ದಾರೆ. ಮೊದಲಿಗೆ ಇವರಿಬ್ಬರು ಮಾನಸಿಕ ಅಸ್ವಸ್ಥರಿರಬಹುದು ಎಂದು ಭಾವಿಸಿದ್ದೆವು. ಆದರೆ ಇವರಿಬ್ಬರು ಸಂಚು ರೂಪಿಸಿ ಸದನಕ್ಕೆ ಪ್ರವೇಶಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಖಾಸಗಿ ವಾಹಿನಿಗೆ ಮಾಹಿತಿ ನೀಡಿದರು.
ಹೊರಗಡೆ ಇಬ್ಬರು ವಶಕ್ಕೆ
ಇದೇ ವೇಳೆ ಸಂಸತ್ ಭವನದ ಹೊರಗಿರುವ ಸಾರಿಗೆ ಭವನದ ಮುಂಭಾಗ ಬಣ್ಣ ಹೊಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಇವರಿಗೂ ಸದನದ ಒಳಗೆ ನುಗ್ಗಿರುವ ವ್ಯಕ್ತಿಗಳಿಗು ಏನಾದರು ಸಂಬಂಧವಿದೆಯೇ ಎಂಬ ಬಗ್ಗೆ ವಿಚಾರಣೆಯನ್ನು ನಡೆಸಲಾಗುತ್ತಿದೆ.

ಹುತಾತ್ಮರಿಗೆ ಗೌರವ
ಸಂಸತ್ ಭವನದ ಮೇಲೆ ದಾಳಿ ನಡೆದು ೨೨ ವರ್ಷಗಳಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸಂಸತ್‌ನಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನವನ್ನು ಸಲ್ಲಿಸಲಾಗಿತ್ತು. ಇದೇ ದಿನದಂದೇ ಇಬ್ಬರು ವ್ಯಕ್ತಿಗಳು ಸದನ ಪ್ರವೇಶಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಸಂಶಯಗಳು ವ್ಯಕ್ತವಾಗಿ ಭದ್ರತಾ ಲೋಪದ ಬಗ್ಗೆ ಎಲ್ಲೆಡೆ ಆತಂಕ ವ್ಯಕ್ತವಾಗಿದೆ.