ಲೋಕಸಭಾ ಚುನಾವಣೆ: ಹೊಸಪೇಟೆ ಬಸ್ನಿಲ್ದಾಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ


ಹೊಸಪೇಟೆ (ವಿಜಯನಗರ) ಮೇ.04: ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗ, ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಹಾಗೂ ತಾಲ್ಲೂಕು ಪಂಚಾಯತಿ ಇವರ ಸಂಯುಕ್ತಾಶ್ರಯದಲ್ಲಿ ಮೇ 3ರಂದು ಹೊಸಪೇಟೆಯ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು. ಬಿ ಅವರು ಮಾತನಾಡಿ, ಮತದಾನವೆಂಬುದು ಪವಿತ್ರವಾದ ಸಂವಿಧಾನ ಬದ್ದವಾದ ಹಕ್ಕಾಗಿದೆ. ಲೋಕಸಭಾ ಚುನಾವಣೆಯ ಮತದಾನವು ಮೇ 07ರಂದು ನಡೆಯಲಿದ್ದು, ಅಂದು ಅರ್ಹ ಪ್ರತಿಯೊಬ್ಬ ಮತದಾರರು ಮತಗಟ್ಟೆಗಳಿಗೆ ಹೋಗಿ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಅತ್ಯಂತ ಪವಿತ್ರವಾಗಿದೆ. ಯಾವುದೇ ಮತದಾರರು ಆಸೆ ಆಮೀಷಗಳಿಗೆ ಒಳಗಾಗದೇ, ತಮ್ಮ ಮತವನ್ನು ಮಾರಿಕೊಳ್ಳದೆ, ಪ್ರಜಾಪ್ರಭುತ್ವದ ಬದ್ರ ಬುನಾದಿಗಾಗಿ ಶ್ರೇಷ್ಟ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಪ್ರತಿಯೊಂದು ಮತವು ಸಹ ಅಮೂಲ್ಯವಾಗಿದ್ದು, ನೈತಿಕ ಹಾಗು ಕಡ್ಡಾಯ ಮತದಾನ ಮಾಡಬೇಕು. ಮತದಾನದಿಂದ ಯಾರು ಸಹ ಹೊರಗುಳಿಯದೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸ್ವಯಂ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ವಯೋವೃದ್ದರಿಗೆ, ವಿಕಲಚೇತನರಿಗೆ ಮತದಾನ ಮಾಡಲು ಸೂಕ್ತ ವ್ಯವಸ್ಥೆ ಹಾಗು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಬಸ್‌ಗಾಗಿ ಕಾಯುತ್ತಿರುವವರು ಹಾಗೂ ಬಸ್‌ಗಳಲ್ಲಿ ಕುಳಿತಿರುವ ಮತದಾರರು ಸೇರಿದಂತೆ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸುತ್ತಾ ಕರ ಪತ್ರವನ್ನು ಹಂಚುವ ಮೂಲಕ ಸಿಇಓ ಅವರು ಮತದಾನದ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತದವರು, ಗೊಂಬೆ ವೇಷಧಾರಿಗಳು, ಮತದಾನ ಜಾಗೃತಿ ಫಲಕಗಳನ್ನು ಹಿಡಿದ ಮಾಹಿಳೆಯರು ಮತ್ತು ಕೆಎಸ್‌ಆರ್‌ಟಿಸಿಯ ಬಸ್ ಡ್ರೆವರ್ ಗಳು, ನಿರ್ವಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಗೃತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದರು.
ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿಗಳಾದ ಜೆ.ಎಂ. ಅನ್ನದಾನಸ್ವಾಮಿ ಅವರು ಬಸ್ ನಿಲ್ದಾಣದಲ್ಲಿರುವ ಎಲ್ಲಾ ನಾಗರಿಕರಿಗೆ ಹಾಗೂ ಕೆಎಸ್‌ಆರ್‌ಟಿಸಿಯ ಅಧಿಕಾರಿ ಸಿಬ್ಬಂದಿ ವರ್ಗದವರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತರಾದ ಚಂದ್ರಪ್ಪ, ಹೊಸಪೇಟೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್.ಆರ್., ಜಿಲ್ಲಾ ಪಂಚಾಯತ್‌ನ ಯೋಜನಾ ಅಂದಾಜು ಮೌಲ್ಯಮಾಪನಾಧಿಕಾರಿ ಪತ್ರಿಬಸಪ್ಪ ಎನ್.ಕೆ., ಅಧೀಕ್ಷಕರಾದ ಲೋಕೇಶ್ ಬಾಬು, ಜಿಲ್ಲಾ ಐಇಸಿ ಫಾಜಿಲ್, ತಾಲೂಕು ಐಇಸಿ ನಾಗರಾಜ, ನಗರಸಭೆ ಅಭಿಯಂತರರಾದ ಆರತಿ, ಕೆಎಸ್‌ಆರ್‌ಟಿಸಿಯ ವಿಭಾಗಿಯ ಸಂಚಾರಿ ಅಧಿಕಾರಿ ರಾಜಶೇಖರ ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರು ವಿದ್ಯಾರ್ಥಿಗಳು ಇದ್ದರು.