ಲೋಕಸಭಾ ಚುನಾವಣೆ ಸೋಲಿಗೆ ಷಡ್ಯಂತ್ರ ಕಾರಣ

ಮಧುಗಿರಿ, ನ. ೨೭- ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಕ್ಕೆ ನ್ಯಾಯ ದೊರಕಿಸಿದ್ದು ಜೆಡಿಎಸ್ ಪಕ್ಷ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವರ ಷಡ್ಯಂತ್ರದಿಂದ ನಾನು ಸೋಲು ಅನುಭವಿಸಬೇಕಾಯಿತು. ಆದರೆ ನಾನು ಅದನ್ನು ಮನದಲ್ಲಿಟ್ಟುಕೊಂಡು ದ್ವೇಷ ರಾಜಕೀಯ ಮಾಡುವವನಲ್ಲ. ೧೯೯೪ ರಲ್ಲಿ ನನಗೆ ಜ್ವರ ಬಂದಿದ್ದರೂ ಅಂದು ಬೆಳ್ಳಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿ ಗೆಲ್ಲಿಸಿದ್ದೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಅವರೇ ಕಾರಣರಾದರು. ಇದರಿಂದ ನಾನು ಅಂದು ತಪ್ಪು ಮಾಡಿದೆ ಎಂದು ಈಗ ಅನ್ನಿಸುತ್ತಿದೆ ಎಂದು ಕೆ.ಎನ್.ಆರ್ ಹೆಸರೇಳದೇ ಕುಟುಕಿದರು.
ಈಗ ನೀವುಗಳು ಅದೇ ತಪ್ಪು ಮಾಡುವುದು ಬೇಡ, ನಮ್ಮ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಅದಕ್ಕೆ ಉತ್ತರ ನೀಡಬೇಕು. ಅನಿಲ್‌ಕುಮಾರ್ ತಳ ಸಮುದಾಯದಿಂದ ಮೇಲಕ್ಕೆ ಬಂದಿರುವಂತಹ ಉತ್ತಮ ವ್ಯಕ್ತಿಯಾಗಿದ್ದು, ಅವರು ತಮ್ಮ ಪದವಿಗೂ ಕೂಡ ರಾಜೀನಾಮೆ ಸಲ್ಲಿಸಿ ಜನರ ಸೇವೆ ಮಾಡಲು ಬಂದಿದ್ದಾರೆ. ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ರಾಜ್ಯಗಳು ಅಭಿವೃದ್ಧಿ ಹೊಂದಲು ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳು ಸಂವಿಧಾನ ಬದ್ಧವಾಗಿ ನೀಡುವಂತಹ ಅನುದಾನವನ್ನು ಸಹ ನೀಡುತ್ತಿಲ್ಲ. ಮಧುಗಿರಿ ಕ್ಷೇತ್ರವು ಬಹಳ ಹಿಂದುಳಿದ ಕ್ಷೇತ್ರವಾಗಿದ್ದು, ಕಂದಾಯ ಜಿಲ್ಲೆಯನ್ನು ಮಾಡಲು ದೇವೇಗೌಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಡಿ.ಸಿ. ಗೌರಿಶಂಕರ್ ಮಾತನಾಡಿ, ಬಿಜೆಪಿ ಪಕ್ಷದವರು ನಾಮಕಾವಸ್ತೆಗೆ ಗೊತ್ತು-ಗುರಿ ಇಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ನಿಲ್ಲುವಂತ ಗಂಡಸು ಯಾರೂ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಅನಿಲ್‌ಕುಮಾರ್ ಮಾತನಾಡಿ, ನನ್ನಂತಹ ತಳ ಸಮುದಾಯದ ವ್ಯಕ್ತಿಗೆ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಜೆಡಿಎಸ್ ಪಕ್ಷಕ್ಕೆ ನಾನು ಆಭಾರಿಯಾಗಿದ್ದೇನೆ. ಯಾವುದೇ ಸಂದರ್ಭದಲ್ಲೂ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಅವರನ್ನು ಮುಖ್ಯಮಂತ್ರಿ ಮಾಡಲು ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.