ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನ

ಈಶ್ವರಪ್ಪ ಭವಿಷ್ಯ
ರಾಯಚೂರು,ಅ.೨೦:ಸುಳ್ಳು ಭರವಸೆಗಳನ್ನು ಹೇಳಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸೇರಿದಂತೆ ದೇಶದಲ್ಲೇ ಕಾಂಗ್ರೆಸ್‌ಗೆ ಜನ ಬೆಂಬಲವಿಲ್ಲ, ಸುಳ್ಳು ಭರವಸೆಗಳು, ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಸದ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಪ್ರಕರಣವನ್ನು ನ್ಯಾಯಾಲಯ ಸಿಬಿಐ ತನಿಖೆಗೆ ಒಪ್ಪಿಸಿದೆ. ಈ ಮಧ್ಯೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದು, ಸತೀಶ್ ಜಾರಕಿಹೊಳಿ ತಮ್ಮ ಕಡೆ ಎಷ್ಟು ಜನರನ್ನು ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಕಲಬುರಗಿ ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್‌ಪಾಟೀಲ್ ರಾಜೀನಾಮೆಗೆ ಆಗ್ರಹಿಸಿದ ಈಶ್ವರಪ್ಪ, ನನ್ನ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ವೇಳೆ ಬಿಜೆಪಿಯವರು ನಾನು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಸ್ವತಃ ನಾನೇ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಾರದೆಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರವರಿಗೆ ಮಾಹಿತಿ ನೀಡಿ ರಾಜೀನಾಮೆ ಸಲ್ಲಿಸಿದ್ದೆ. ತನಿಖೆ ನಂತರ ನಾನು ನಿರ್ದೋಷಿ ಎಂದು ಸಾಬೀತಾಗಿದೆ.ಸಚಿವ ಶರಣ ಪ್ರಕಾಶ್‌ಪಾಟೀಲ್ ಸಹ ಇದೇ ರೀತಿಯನ್ನು ಅನುಸರಿಸಲಿ ಸದ್ಯ ಅವರ ಹೆಸರನ್ನು ಬಿಜೆಪಿ ಕಾರ್ಯಕರ್ತ ಬರೆದಿಟ್ಟು ನನ್ನ ಆತ್ಮಹತ್ಯೆಗೆ ಸಚಿವ ಶರಣ ಪ್ರಕಾಶ್‌ಪಾಟೀಲ್‌ರವರೇ ಕಾರಣ ಎಂದು ತಿಳಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಚಿವರು ರಾಜೀನಾಮೆ ನೀಡಿ ನಿರ್ದೋಷಿ ಎಂದು ಸಾಬೀತಾದ ನಂತರ ಮತ್ತೆ ಸಚಿವ ಸ್ಥಾನ ಅಲಂಕರಿಸಲಿ ಎಂದು ಹೇಳಿದರು.