ಲೋಕಸಭಾ ಚುನಾವಣೆ ದಾವಣಗೆರೆಯಲ್ಲಿ ಕ್ರಾಂತಿಯುಂಟು ಮಾಡಲಿದೆ; ಜಿ.ಬಿ ವಿನಯಕುಮಾರ್

ಸಂಜೆವಾಣಿ ವಾರ್ತೆ

ದಾವಣಗೆರೆ. ಮೇ.೭; ಈ ಬಾರಿಯ ಲೋಕಸಭಾ ಚುನಾವಣೆ ದಾವಣಗೆರೆಯಲ್ಲಿ ಕ್ರಾಂತಿಯುಂಟು ಮಾಡಿದೆ.ನಾನು ಸ್ವಾಭಿಮಾನಿಯಾಗಿ ಹೋರಾಟ ಮಾಡುತ್ತಿದ್ದೇನೆ ಇಂದು ನನ್ನ ಹಕ್ಕು ಮತ ಚಲಾಯಿಸಿದ ಹೆಮ್ಮೆ ನನಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ‌.ವಿನಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.ದಾವಣಗೆರೆ ಸಮೀಪದ ಕರೂರು ಗ್ರಾಮದ ಅಂಗನವಾಡಿ‌ ಕೇಂದ್ರದಲ್ಲಿ‌ ಮತಚಲಾಯಿಸಿ ಮಾತನಾಡಿದ ಅವರು ಜೀವನದ ಅತ್ಯಂತ ಸಂತೋಷದ ದಿನ ಇದಾಗಿದೆ.ಪ್ರಜಾಪ್ರಭುತ್ವದ ಗೆಲುವಿಗಾಗಿ ಹೋರಾಟ ನನ್ನದು. ಸಾಮಾನ್ಯ ಕುಟುಂಬದಿಂದ ಬಂದಿರುವ ನಾನು ದಾವಣಗೆರೆಯಂತಹ ಮಹಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೇನೆ ಯಾವ ರಾಜಕೀಯ ಹಿನ್ನೆಲೆ ನನಗಿಲ್ಲ ಆದರೂ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಅಲೆಯೆಬ್ಬಿಸಿದ್ದೇನೆ.ಒಳ್ಳೆಯ ರಾಜಕಾರಣ ಮಾಡಬೇಕು ಎಂಬ ನಂಬಿಕೆಯೊಂದಿಗೆ ಸ್ಪರ್ಧೆ ಮಾಡಿದ್ದೇನೆ ಹಾಗೂ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದರು.ಚುನಾವಣೆಯಲ್ಲಿ ಯಾವ ಆಸೆ ಆಮೀಷಗಳನ್ನು ನೀಡದೆ ಸ್ವಾಭಿಮಾನಿಯಾಗಿ ಜನರ ಬಳಿಗೆ ಬಂದಿದ್ದೇನೆ.ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಇದಷ್ಟೇ ಅಲ್ಲ ಗ್ರಾಮೀಣಭಾಗದಿಂದ ನಗರ ಮಟ್ಟದಲ್ಲೂ ಬೆಳಗಿನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಜನರೂ ಕೂಡ ಜಾಗೃತರಾಗಿದ್ದಾರೆ.ಈ ಚುನಾವಣೆಯಲ್ಲಿ ಹಣದ ಹೊಳೆಹರಿಸಿದವರು ಸೋಲಬೇಕು ನ್ಯಾಯಯುತವಾಗಿ ಚುನಾವಣೆ ಮಾಡುವವರಿಗೆ ಜನ ಗೆಲ್ಲಿಸಬೇಕು ಎಂದರು.ನನ್ನ ಕ್ರಮಸಂಖ್ಯೆ ಕೊನೆಯಲ್ಲಿ‌ಬರುತ್ತದೆ ಈ ಬಗ್ಗೆ ಜನರಿಗೆ ತಿಳಿಸಿದ್ದೇನೆ ಇವಿಎಂ ಬಗ್ಗೆ ಇನ್ನೂ ಕೆಲವರಲ್ಲಿ ಗೊಂದಲಗಳಾಗುವ ಸಂಭವವಿರುತ್ತದೆ ಅಂತವರಿಗೆ ಸಹಾಯ ಮಾಡಬೇಕು.ಮುಂದಿನ ದಿನಗಳಲ್ಲಿ ಆನ್ ಲೈನ್ ಮತದಾನ ಪ್ರಕ್ರಿಯೆ ನಡೆಸಬೇಕು ಎಂಬುದು ನನ್ನ ಸಲಹೆ ಎಂದರು.