ಲೋಕಸಭಾ ಚುನಾವಣೆ ಕೈ ರಣತಂತ್ರ

ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಪಕ್ಷದ ಸರ್ವ ಸದಸ್ಯರ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಡಾ|| ಎಂ. ವೀರಪ್ಪ ಮೊಯಲಿ, ಸಚಿವರಾದ ದಿನೇಶ್ ಗುಂಡೂರಾವ್, ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಕಾರ್ಯಾಧ್ಯಕ್ಷ ಸಲೀಂ ಅಹಮದ್ ಇದ್ದಾರೆ.

ಬೆಂಗಳೂರು, ಆ. ೧೪- ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಿರುವ ರಾಜ್ಯ ಕಾಂಗ್ರೆಸ್ ಈಗ ಲೋಕಸಭಾ ಚುನಾವಣೆಯತ್ತ ಚಿತ್ತ ಹರಿಸಿದ್ದು, ಲೋಕಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಸರ್ವ ಸದಸ್ಯರ ಸಭೆ ನಡೆದಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಕೆಪಿಸಿಸಿಯ ಸರ್ವ ಸದಸ್ಯರ ಸಭೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳು, ಎಲ್ಲ ಸಚಿವರು, ಶಾಸಕರು, ಹಿರಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡು ಲೋಕಸಭಾ ಚುನಾವಣೆಗೆ
ರಣತಂತ್ರ ರೂಪಿಸುವ ಸಂಬಂಧ ಸಮಾಲೋಚನೆ ನಡೆಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೨೦ ಸ್ಥಾನ ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಪಕ್ಷ ಹಾಕಿಕೊಂಡಿದ್ದು, ಈ ಗುರಿ ಸಾಧನೆಗೆ ಏನೆಲ್ಲಾ ಚುನಾವಣಾ ತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಗಳು ನಡೆದವು.
ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೂ ತಲುಪಿಸಿ ಜನರ ಒಲವು ಕಾಂಗ್ರೆಸ್ ಪಕ್ಷದಿಂದ ಬೇರೆಡೆ ಹೋಗದಂತೆ ನೋಡಿಕೊಳ್ಳುವ ಜತೆಗೆ ಬ್ಲಾಕ್ ಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ.
ಮುಂದಿನ ಲೋಕಸಭಾ ಚುನಾವಣೆ
ಯಲ್ಲಿ ಕನಿಷ್ಠ ೨೦ ಸ್ಥಾನಗಳನ್ನು ಗೆಲ್ಲಲು ಸ್ಥಳೀಯ ಮಟ್ಟದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬೇಕು, ಕಾರ್ಯಕರ್ತರು ಹಾಗೂ ಮುಖಂಡರುಗಳು ಈಗಿನಿಂದಲೇ ಯಾವ ರೀತಿ ಚುನಾವಣಾ ತಯಾರಿಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಗಳನ್ನು ನಡೆಸಲಾಗಿದೆ.
ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ, ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಕೆಪಿಸಿಸಿ ಸರ್ವ ಸದಸ್ಯರ ಸಭೆ ನಡೆದಿದ್ದು, ಈ ಸಭೆಯಲ್ಲಿ ಕಾರ್ಯಕರ್ತರಿಗೂ ಅಧಿಕಾರ ಹಂಚಿಕೆ ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ನಿಗಮ ಮಂಡಳಿಗಳಿಗೆ ನೇಮಕ ಮಾಡಿ, ಪಕ್ಷಕ್ಕೆ ದುಡಿದಿರುವ ಕಾರ್ಯಕರ್ತರಿಗೆ ಆದ್ಯತೆ ನೀಡುವ ಭರವಸೆಯನ್ನು ನಾಯಕರುಗಳು ಈ ಸಭೆಯಲ್ಲಿ ನೀಡಿದ್ದಾರೆ.
ಹಾಗೆಯೇ ಲೋಕಸಭಾ ಚುನಾವಣೆಗೆ ಏನೆಲ್ಲಾ ತಯಾರಿಗಳು ಆಗಬೇಕು ಎಂಬ ಬಗ್ಗೆಯೂ ನಾಯಕರುಗಳು ಕಾರ್ಯಕರ್ತರುಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್‌ನ ಎಲ್ಲ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕೆಪಿಸಿಸಿ ಸರ್ವ ಸದಸ್ಯರುಗಳು, ಚುನಾವಣೆಯಲ್ಲಿ ಪರಾಜಯ ಹೊಂದಿದ ಅಭ್ಯರ್ಥಿಗಳು, ಮಾಜಿ ಶಾಸಕರುಗಳು, ಹಾಲಿ ಶಾಸಕರು ಸೇರಿದಂತೆ ಎಲ್ಲ ಪ್ರಮುಖ ಮುಖಂಡರುಗಳು ಪಾಲ್ಗೊಂಡಿದ್ದರು.