ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಬದಲು ಬೇರೆಯವರಿಗೆ ಬಿಜೆಪಿ ಟಿಕೆಟ್ ನೀಡಲು ಒತ್ತಾಯ

ಕಲಬುರಗಿ,ಜೂ.27:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‍ನ್ನು ಸಂಸದ ಡಾ. ಉಮೇಶ್ ಜಾಧವ್ ಅವರ ಬದಲಿಗೆ ಬೇರೆಯವರಿಗೆ ಕೊಡಬೇಕು ಎಂದು ಶ್ರೀ ಬಿ.ಎಸ್. ಯಡಿಯೂರಪ್ಪ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬಾಬುರಾವ್ ಎಸ್. ಬಸವಂತವಾಡಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ. ಉಮೇಶ್ ಜಾಧವ್ ಅವರು ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಹಾಗಾಗಿ ಅವರಿಗೆ ಈ ಬಾರಿ ಟಿಕೆಟ್ ಕೊಡಬಾರದು ಎಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕಾರ್ಯಕರ್ತರಿಗೆ ನನಗೆ ಗೆಲ್ಲಿಸಿದರೆ ನೀವು ಹೇಳುವ ಎಲ್ಲ ಕೆಲಸಗಳನ್ನು ಹಿಂದೆ, ಮುಂದೆ ನೋಡದೇ ಮಾಡಿಕೊಡುವುದಾಗಿ, ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುವುದಾಗಿ ಡಾ. ಉಮೇಶ್ ಜಾಧವ್ ಅವರು ಭರವಸೆ ಕೊಟ್ಟಿದ್ದರು. ಆದಾಗ್ಯೂ, ಅದಾವುದನ್ನೂ ಸಹ ಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಮತ್ತು ರಾಷ್ಟ್ರ ನಾಯಕರು ಉಮೇಶ್ ಜಾಧವ್ ಅವರಿಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪ್ರಚಾರ ಸಮಿತಿ ಸ್ಟಾರ್ ಪ್ರಚಾರಕರನ್ನಾಗಿ ನೇಮಕ ಮಾಡಿತ್ತು. ಆದಾಗ್ಯೂ, ಅವರು ಜಿಲ್ಲೆಯ ಅಫಜಲಪುರ, ದಕ್ಷಿಣ, ಜೇವರ್ಗಿ, ಆಳಂದ್ ಸೇರಿದಂತೆ ಉಳಿದ ಕ್ಷೇತ್ರಗಳಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ಡಾ. ಉಮೇಶ್ ಜಾಧವ್ ಅವರ ಅವಧಿಯಲ್ಲಿ ಆಗಿಲ್ಲ. ಪಕ್ಷದ ಬೆಳವಣಿಗೆಯ ಕುರಿತೂ ಸಹ ಅವರು ಗಮನಹರಿಸುತ್ತಿಲ್ಲ. ಹಾಗಾಗಿ ಅವರ ಬದಲು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟರೆ ಬಿಜೆಪಿ ಗೆಲುವು ಸಾಧಿಸಲಿದೆ. ಒಂದು ವೇಳೆ ಮತ್ತೆ ಏನಾದರೂ ಡಾ. ಉಮೇಶ್ ಜಾಧವ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಸೋಲುವ ಭೀತಿಯಿದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ಅವರ ಕಟ್ಟಾ ಅಭಿಮಾನಿ ಭೀಮಾಶಂಕರ್ ಎನ್. ಎಳಮೇಲಿ ಅವರು ಉಪಸ್ಥಿತರಿದ್ದರು.