ಲೋಕಸಭಾ ಚುನಾವಣೆಗೆ ನಾರಿ ನ್ಯಾಯ ಗ್ಯಾರಂಟಿ ಘೋಷಿಸಿದ ಖರ್ಗೆ: ಪ್ರತಿ ವರ್ಷ ಬಡ ಕುಟುಂಬದ ಯಜಮಾನಿಗೆ ಒಂದು ಲಕ್ಷ ರೂ.ಗಳ ನೆರವು

ಕಲಬುರಗಿ:ಮಾ.13: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಾದರಿಯಲ್ಲಿಯೇ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ ನಾರಿ ನ್ಯಾಯ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗುತ್ತದೆ. ಮಹಾಲಕ್ಷ್ಮೀ ಯೋಜನೆಯಡಿ ಬಡ ಕುಟುಂಬದ ಮಹಿಳೆಗೆ ಒಂದು ಲಕ್ಷ ರೂ.ಗಳ ಅನುದಾನ ಒದಗಿಸಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.
ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಬುಧವಾರ ಪಂಚ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದರೆ ಹೆಣ್ಣು ಮಕ್ಕಳಿಗೆ ನಾವು ಸಾಮಾಜಿಕ ಹೋರಾಟಗಾರ್ತಿ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ವಸತಿ ನಿಲಯ ಮಾಡುತ್ತೇವೆ. ಜನಸಂಖ್ಯೆ ಹೆಚ್ಚಳ ಇದ್ದಲ್ಲಿ ಎರಡು ವಸತಿ ನಿಲಯಗಳನ್ನು ಮಾಡುತ್ತೇವೆ ಎಂದು ಘೋಷಿಸಿದರು.
ಒಂದು ಮನೆಯಲ್ಲಿ ಪುರುಷರಿಗೆ ಎಷ್ಟು ಅವಕಾಶಗಳು ಸಿಗಬೇಕೋ, ಅಂತಹ ಅವಕಾಶಗಳು ಮಹಿಳೆಯರಿಗೆ ಸಿಗಬೇಕು. ಅದೂ ಒಂದು ಮನೆಯಲ್ಲಿ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಮನೆಯೇ ಶಿಕ್ಷಣ ಪಡೆದಂತಾಗುತ್ತದೆ. ಹೀಗಾಗಿ ಅವರ ಶಿಕ್ಷಣಕ್ಕೆ ಒತ್ತು ಕೊಟ್ಟು, ಅವರಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ, ಅವರು ಸ್ವಾವಲಂಬಿ ಜೀವನವನ್ನು ಮಾಡಲು ಸುಮಾರು ಒಂದು ಲಕ್ಷ ರೂ.ಗಳವರೆಗೆ ವೆಚ್ಚ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ನಾವು ಈಗಾಗಲೇ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ಜನಸಂಖ್ಯೆಯನ್ನು ಸಮುದಾಯ ಆಧಾರಿತ ಶಿಕ್ಷಣ, ಆದಾಯ, ಜಮೀನು ಸೇರಿದಂತೆ ಎಲ್ಲ ಮಾಹಿತಿಯನ್ನು ಜಾತಿ ಜನಗಣತಿ ಸರ್ವೆ ಮಾಡುತ್ತೇವೆ. ಯಾವುದೇ ಸಮುದಾಯ ಇದ್ದರೂ ಬಡವರು ಇದ್ದರೆ, ಸಂಖ್ಯಾ ಬಲ ಕಡಿಮೆ ಇದ್ದರೂ ಅವರ ಹತ್ತಿರ ಸಂಪತ್ತಲ್ಲ ಇಲ್ಲ ಎಂದರೆ ಅಂತಹ ಕುಟುಂಬಕ್ಕೆ ಶಿಕ್ಷಣ, ಆದಾಯ ಹೆಚ್ಚಿಗೆ ಮಾಡಲು ಯೋಜನೆ ಕೊಡುತ್ತೇವೆ ಎಂಧು ಅವರು ತಿಳಿಸಿದರು.
ಎಂಎಸ್‍ಪಿ ಗ್ಯಾರಂಟಿ, ಯುವ ನ್ಯಾಯ ಗ್ಯಾರಂಟಿ ಸಹ ಘೋಷಿಸಿದ್ದೇವೆ. ನಾವು ಶಿಕ್ಷಣ ಪಡೆದ ಪದವಿಧರರು, ಡಿಪ್ಲೋಮಾ ಹೊಂದಿದವರಿಗೆ ಒಂದು ವರ್ಷ ತರಬೇತಿ ಕೊಟ್ಟು, ಒಂದು ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರವು ಶಿಷ್ಯವೇತನ ಕೊಡುತ್ತೇವೆ. 8500ರೂ.ಗಳ ವೆಚ್ಚದಲ್ಲಿ ಅಪ್ರೆಂಟಿಸ್ ತರಬೇತಿ ಕೊಟ್ಟು ಒಂದು ಲಕ್ಷ ರೂ.ಗಳನ್ನು ಖರ್ಚು ಮಾಡುತ್ತೇವೆ. 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಎರಡು ವರ್ಷಗಳಲ್ಲಿ ಆ ಕೆಲಸ ಮಾಡುತ್ತೇವೆ. ಇದು ನಮ್ಮ ಗ್ಯಾರಂಟಿ. ಕೇಂದ್ರದ ಎಲ್ಲ ಹೊಸ ನೇಮಕಾತಿಗಳಲ್ಲಿ ಶೇಕಡಾ 50ರಷ್ಟು ಮಹಿಳೆಯರಿಗೆ ಮೀಸಲಿಡಲಾಗುತ್ತದೆ ಎಂದು ಅವರು ಹೇಳಿದರು.
ಆಶಾಗಳು, ಅಂಗನವಾಡಿ ನೌಕರರು ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಮಹಿಳೆಯರ ವೇತನವನ್ನು ದ್ವಿಗುಣಗೊಳಿಸಲಾಗುವುದು. ಎಲ್ಲ ಪಂಚಾಯಿತಿಗಳಲ್ಲಿ ಅಧಿಕಾರ ಮೈತ್ರಿಯ ನೇಮಕದ ಮೂಲಕ ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ದೇಶದ ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿಯ ಸಂಸದ ಹೊಂಟಿದ್ದಾನೆ. ಅನೇಕ ಜನರ ತ್ಯಾಗ, ಬಲಿದಾನದಿಂದ ದೇಶ ಸ್ವತಂತ್ರಗೊಂಡಿದೆ. ಲಕ್ಷಾಂತರ ಜನ ಲಾಠಿ ಪ್ರಹಾರ ಮಾಡಿಸಿಕೊಂಡಿದ್ದಾರೆ. ಅಂಥವರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಬಿಜೆಪಿಯವರಿಗೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿಳಾಸ ಇರಲಿಲ್ಲ. ಅವರು ದೇಶಕ್ಕಾಗಿ ಹೋರಾಟ ಮಾಡಿಲ್ಲ ಎಂದು ಆರೋಪಿಸಿದ ಅವರು, ಏನೆಪಾ ದೊಡ್ಡ ಆಣೆಕಟ್ಟು ನಿಮ್ಮದೇನಾ, ಮೈಸೂರು, ನಾರಾಯಣಪುರ, ಕಾರಂಜಾ ಆಣೆಕಟ್ಟು ನೀವೇ ಕಟ್ಟಿದ್ದೀರಾ, ಹತ್ತು ವರ್ಷಗಳಲ್ಲಿ ಏನೂ ಮಾಡಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಗುಡುಗಿದರು.
ಪ್ರಧಾನಿಯಾಗುವ ಮುನ್ನ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದರು. ಅಲ್ಲಿ 13ವರೆ ವರ್ಷ ಆಡಳಿತ ಮಾಡಿದರು. ಆದಾಗ್ಯೂ, ಆ ರಾಜ್ಯದಲ್ಲಿ ಈಗ ಅಲ್ಲಿ 25000 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ. ಅವರ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಇದೆ. ಆ ಕಡೆಗೆ ಕಣ್ಣು ತೆರೆಯುವುದನ್ನು ಬಿಟ್ಟು ಪ್ರಧಾನಿ ಅದಾನಿ, ಅಂಬಾನಿ ಅವರ ಕಡೆಗೆ ಕಣ್ಣು ಬಿಡುತ್ತಿದ್ದಾರೆ ಎಂದು ಟೀಕಿಸಿದರು.
ನರೇಗಾ, ಆಹಾರ ಭದ್ರತೆ ಯೋಜನೆ ಜಾರಿಗೆ ತಂದು ಬಡವರ ಹೊಟ್ಟೆ ತುಂಬಿಸಿದವರು ಕಾಂಗ್ರೆಸ್ಸಿನವರು. ಕಾಂಗ್ರೆಸ್ ಕೊಡುತ್ತಿದ್ದ ಅಕ್ಕಿಗೆ ಐದು ಕೆಜಿ ಸೇರಿಸಿ 80 ಕೋಟಿ ಪಡಿತರ ಕೊಡುತ್ತೇವೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳುತ್ತಿದೆ. ಹತ್ತು ಕೆಜಿ ಇದ್ದದ್ದು ಐದು ಕೆಜಿ ಕಡಿಮೆ ಮಾಡಲಾಗಿದೆ. ನಾವು ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಮತ್ತೆ ಜಾರಿಗೆ ಮಾಡುತ್ತೇವೆ. ಇದು ನಮ್ಮ ಛಲ. ಬಡವರಿಗಾಗಿ ಮಾಡುತ್ತೇವೆ ಎಂದು ಘೋಷಿಸಿದರು.
2024ರಲ್ಲಿ ಕೃಷಿ ಉತ್ಪನ್ನಗಳೀಗೆ ಬೆಂಬಲ ಬೆಲೆ ಗ್ಯಾರಂಟಿ ಕಾಯ್ದೆ ಜಾರಿಗೆ ತರುತ್ತೇವೆ. ಇದರಿಂದ ರೈತರಿಗೆ ಲಾಭ ಆಗುತ್ತದೆ. ಮೋದಿ ಅವರಿಗೆ ಆ ಲಕ್ಷವಿಲ್ಲ. ರೈತರು ಒಂದು ತಿಂಗಳಾದರೂ ಅವರಿಗೆ ದೆಹಲಿಗೆ ಬರದಿರಲು ಮುಳ್ಳಿನ ಹಾಸಿಗೆ ಹಾಕಿದ್ದಾರೆ. ಬುಲ್ಡೋಜರ್ ಮೂಲಕ ಮುಳ್ಳನ್ನು ತಂದು ಹಾಕಿದ್ದಾರೆ. ಎಂಎಸ್‍ಪಿ ಜಾರಿ ಮಾಡದೇ ರೈತರ ಚಳುವಳಿಕಯನ್ನು ಕೇಂದ್ರ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಅವರು ದೂರಿದರು.
ಗುಜರಾತ್‍ನಲ್ಲಿ ಸುಮಾರು 500 ವಿದ್ಯಾರ್ಥಿಗಳು ಮೂರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ನೌಕರಿಗಳಿಲ್ಲ. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆ ಹಾಕಿದಾಗ ಬಿಜೆಪಿ ಸರ್ಕಾರವು ಕೊಟ್ಟ ಉತ್ತರದ ಮೇಲೆ ನಾನು ಹೇಳುತ್ತಿರುವೆ. ಹಾಗಾಗಿ ಬಿಜೆಪಿಯವರಿಗೆ ಮೋಸ ಹೋಗಬೇಡಿ. ಅವರು ಮೋಸಗಾರರು, ಸುಳ್ಳು ಹೇಳುವವರು. ಸತ್ಯವನ್ನು ಮರೆಮಾಚಿ, ಜನರಿಗೆ ಏನೇನೋ ಹೇಳಿಕೊಂಡು ಹೋಗುತ್ತಾರೆ. ಅಂಬೇಡ್ಕರ್ ಅವರು ಹೇಳಿದಂತೆ ನಮ್ಮ ದೇಶ ಒಗ್ಗಟ್ಟು ಇರಬೇಕಾದರೆ ಸಂವಿಧಾನ ರಕ್ಷಿಸಬೇಕು. ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕು. ಐಕ್ಯತೆ ಇರಲಿಲ್ಲ. ದೇಶ ಗುಲಾಮ್ ಆದರೆ ಎಂದಿಗೂ ಕೂಡ ದೇಶ ಏಳದು. ಅದಕ್ಕೆ ನೀವು ಸಂವಿಧಾನ ರಕ್ಷಣೆ ಮಾಡುವುದು ನಿಮ್ಮ ಕೆಲಸ. ಪ್ರಜಾಪ್ರಭುತ್ವ ಉಳಿಸುವುದು, ಒಗ್ಗಟ್ಟು ಇರುವುದು ನಿಮ್ಮ ಕೆಲಸ. ಅಂತಹ ಮಹತ್ವದ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಆದಾಗ್ಯೂ, ಮೋದಿ ಅಲ್ಲಿ ಬೆಂಕಿ ಇಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಒಬ್ಬ ಮಹಿಳಾ ಪ್ರಧಾನಿಯಾಗಿ ದಿ. ಇಂದಿರಾಗಾಂಧಿ ಅವರು ಇಡೀ ದೇಶವನ್ನು ರಕ್ಷಿಸಿ ಅಭಿವೃದ್ಧಿಗೊಳಿಸಿದರು. ಅವರಿಗೂ ಸಹ ಬಿಜೆಪಿಯವರು ಟೀಕಿಸುತ್ತಾರೆ. ಕಾಂಗ್ರೆಸ್ಸಿನವರು 75 ವರ್ಷಗಳವರೆಗೆ ಅಭಿವೃದ್ಧಿ ಮಾಡಿರದೇ ಹೋದಲ್ಲಿ ದೇಶ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.
ಇದ್ದ ಸಂವಿಧಾನವನ್ನು ಬಿಜೆಪಿಯವರು ತೆಗೆಯುತ್ತಿದ್ದಾರೆ. ಸಂವಿಧಾನದಲ್ಲಿ ನಿಮ್ಮ ಹಕ್ಕಿನ ಪ್ರಶ್ನೆ ಇದೆ. ನಿಮ್ಮ ಹಕ್ಕು ಕಿತ್ತುಕೊಳ್ಳಲು ಮೋಹನ್ ಭಾಗವತ್, ಬಿಜೆಪಿ ಸಂಸದರು ಬಿಹಾರ್, ಉತ್ತರಪ್ರದೇಶದಲ್ಲಿ ಹೇಳುತ್ತಾರೆ. ಅವರೆಲ್ಲರೂ ಸೇರಿ ಸಂವಿಧಾನ ಬದಲಾವಣೆಯ ಪ್ರಯತ್ನ ಮಾಡುತ್ತಿದ್ದಾರೆ. ಒಂದು ಕಡೆ ಸಂವಿಧಾನ ಬದಲಾವಣೆ ಕುರಿತು ಹೇಳಿಕೆಗೆ ನಮ್ಮ ಸಂಬಂಧ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಾದರೆ ಅವರಿಗೆ ಟಿಕೆಟ್ ಕೊಟ್ಟವರು ಯಾರು, ಆರಿಸಿ ತಂದವರು ಯಾರು, ಬಿ ಫಾರ್ಮ್ ಕೊಟ್ಟವರು ಯಾರು?ಅವರ ಬಾಯಿಂದ ಹೇಳಿಸಿ ಈಗ ಸಂಬಂಧ ಇಲ್ಲ ಎಂದರೆ ಹೇಗೆ? ಒಂದು ಕಡೆ ಅವರಿಗೆ ಚಿವುಟಿ, ಮತ್ತೊಂದು ಕಡೆ ನಮಗೆ ಸಮಾಧಾನ ಮಾಡುತ್ತಾರೆ. ಬಿಜೆಪಿ, ಆರ್‍ಎಸ್‍ಎಸ್‍ಯವರ ದ್ವಂದ್ವ ನಿಲುವು ಎಂದು ತರಾಟೆಗೆ ತೆಗೆದುಕೊಂಡರು.
ಪ್ರಜಾಪ್ರಭುತ್ವ ಎಲ್ಲರಿಗೂ ಲಾಭ. ಸಂವಿಧಾನ ಎಲ್ಲರಿಗೂ ಲಾಭ. ನೀವು ಗಟ್ಟಿಯಾಗಿ ನಿಲ್ಲಬೇಕು. ಅದಕ್ಕಾಗಿ ಬರುವ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಆರಿಸಿ ತರಬೇಕು. ಮತ್ತು ಕಾಂಗ್ರೆಸ್ ಪಕ್ಷ ಆರಿಸಿ ಬಂದರೆ ಗ್ಯಾರಂಟಿ ಯೋಜನೆಗಳನ್ನು ನಿಮಗೆ ಕೊಡಿಸಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಅವರು ಹೇಳಿದರು.
ಮೋದಿಯವರು ಎಲೆಕ್ಷನ್ ಬಾಂಡ್, ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ದೇಣಿಗೆ ಬಂದಿದ್ದು ಸ್ಥಗಿತಗೊಳಿಸಿದ್ದಾರೆ. 300, 400 ಕೋಟಿ ರೂ.ಗಳ ದಂಡ ಹಾಕಿಸಿದ್ದಾರೆ. ಅದು ನಮ್ಮ ಹಣ ಇದೆ. ನಮ್ಮ ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದಾರೆ. ಆದಾಗ್ಯೂ, ಬಿಜೆಪಿಯವರು ಹತ್ತು ಪೈಸೆ ಖರ್ಚು ಕೊಟ್ಟಿಲ್ಲ. ಸಾವಿರಾರು ಕೋಟಿ ರೂ.ಗಳನ್ನು ಇಟ್ಟುಕೊಂಡಿದ್ದಾರೆ. ಲೆಕ್ಕ ಕೊಡಲು ಜುಲೈವರೆಗೆ ಸಮಯ ಕೊಡಿ ಎನ್ನುತ್ತಿದ್ದಾರೆ. ಬಿಜೆಪಿಗೆ ಹಣ ಕೊಟ್ಟವರ ಹೆಸರು ಹೊರಗೆ ಯಾಕೆ ಬರತಾ ಇಲ್ಲ. ಚುನಾವಣಾ ಆಯೋಗದ ಆಯುಕ್ತರೇ ಈ ಸಂಬಂಧ ರಾಜೀನಾಮೆ ಕೊಟ್ಟರು. ಈ ಹಿಂದೆ ಒಬ್ಬರು ರಾಜೀನಾಮೆ ಕೊಟ್ಟಿದ್ದಾರೆ. ಮೋದಿ, ಶಾ ಇಂತಹ ಕುತಂತ್ರ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
335 ಕೋಟಿ ರೂ.ಗಳು ಒಂದೇ ದಿನದಲ್ಲಿ ಬಿಜೆಪಿಯವರ ಖಾತೆಗೆ ಬಂದಿದೆ. ಅದನ್ನು ಅವರು ಹೇಳುವುದಿಲ್ಲ. 6000 ಕೋಟಿ ರೂ.ಗಳನ್ನು ಬಾಂಡ್‍ದಿಂದ ತೆಗೆದುಕೊಂಡಿದ್ದಾರೆ. ತಮ್ಮ ಪಕ್ಷಕ್ಕೆ ಹಾಕಿಕೊಂಡಿದ್ದಾರೆ. ಈಗ ನಮಗೆ ಕೇಳುತ್ತಿದ್ದಾರೆ. ಹತ್ತು ವರ್ಷದ ಲೆಕ್ಕ ಕೇಳುತ್ತಿದ್ದೀರಿ. ಪಿ.ವಿ. ನರಸಿಂಹರಾವ್ ಅವರ ಅವಧಿಯಲ್ಲಿನ ಲೆಕ್ಕವನ್ನು ಕೇಳುತ್ತಿದ್ದೀರಿ. ನಮಗೆ ಏಕೆ ಕೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಖರ್ಗೆಯವರು, ನಮಗೆ ಯಾವುದೇ ರೀತಿಯಲ್ಲಿ ಸೋಲಿಸಲು ಬಿಜೆಪಿಯವರು ಸಿದ್ಧರಾಗಿದ್ದಾರೆ. ಜನರಿಗೂ ಸಹ ಬಿಜೆಪಿಯವರ ಕುರಿತು ಅರಿವಾಗಿದೆ. ಕಳೆದ ಸಲ ಮಾಡಿದ ತಪ್ಪು ಕ್ಷಮಿಸಿ. ಪುನ: ಕಾಂಗ್ರೆಸ್ಸಿಗೆ ಅಧಿಕಾರಕ್ಕೆ ತರುತ್ತೇವೆ ಎಂದು ಅವರೇ ಹೇಳುತ್ತಿದ್ದಾರೆ ಎಂದರು.