ಲೋಕಸಭಾ ಚುನಾವಣೆಗೆ ನಡ್ಡಾ ತಯಾರಿ

ನವದೆಹಲಿ,ನ.೧೪- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಿದ್ಧತೆ ನಡೆಸಿದ್ದು, ದೇಶಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ನಡೆದ ಬಿಹಾರ ವಿಧಾನಸಭಾ ಹಾಗೂ ದೇಶದ ವಿವಿಧ ಭಾಗಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಜೆ.ಪಿ ನಡ್ಡಾ ನೂರು ದಿನಗಳ ಕಾಲ ರಾಷ್ಟ್ರೀಯ ವಿಸ್ತೃತ ಪ್ರವಾಸ ಕೈಗೊಂಡಿದ್ದಾರೆ.
ಮುಂಬರುವ ಸಾರ್ವತ್ರಿಕ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸದ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಕೆಲಸ ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಶೀಘ್ರದಲ್ಲೆ ನಾಯಕರೊಂದಿಗೂ ಚರ್ಚಿಸಲು ತೀರ್ಮಾನಿಸಿದ್ದಾರೆ.
ಬಿಹಾರ ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಜೆ.ಪಿ ನಡ್ಡಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಯಾಗುವುದನ್ನು ಭೇಟಿಯಾಗುವುದು ಹೊಸ ಸಂಭಾವ್ಯ ಒಕ್ಕೂಟಗಳ ಬಗ್ಗೆ ಚರ್ಚೆ ನಡೆಸುವುದು, ಪ್ರಭಾವಿ ನಾಯಕರ ಗುಂಪುಗಳ ಜತೆ ಸಂವಹನ ನಡೆಸುವುದು. ಹಿರಿಯ ಕಾರ್ಯಕರ್ತರು ಮತ್ತು ರಾಜ್ಯಗಳಲ್ಲಿನ ಸಮ್ಮಿಶ್ರ ಸರ್ಕಾರದ ಪಾಲುದಾರರ ಜತೆಗೂ ಚರ್ಚಿಸಲು ನಡ್ಡಾ ತೀರ್ಮಾನಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವಿರುವುದರಿಂದ ದೊಡ್ಡ ಕೊಠಡಿಗಳಲ್ಲಿ ಕಾರ್ಯಕ್ರಮ ಆಯೋಜಿಸಿ ೨೦೦ ಮಂದಿಗಿಂತ ಹೆಚ್ಚು ಜನ ಭಾಗವಹಿಸದಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿದೆ.