ಬಳ್ಳಾರಿ, ಜೂ. ೬- ಮುಂಬರುವ ೨೦೨೪ ರ ಲೋಕಸಭಾ ಚುನಾವಣೆಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತೆ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ೨೦೧೪ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಬಿ.ಶ್ರೀರಾಮುಲು ಅವರು ೨೦೧೮ ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಶಾಸಕರಾಗಿ ಆಯ್ಕೆಯಾಗಿದ್ದರಿಂದ ಅವರು ಲೋಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದರಿಂದ ಆಗ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತಾ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪ ಸ್ಪರ್ಧಿಸಿ ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದರು.
ಈ ಉಪ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ಗ್ರಾಮೀಣ, ಸಂಡೂರು, ಕಂಪ್ಲಿ, ವಿಜಯನಗರ, ಹಗರಿಬೊಮ್ಮಹಳ್ಳಿ, ಹಡಗಲಿ
ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದ ಕಾರಣ ಮತ್ತು ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ಚುನಾವಣೆ ಜವಾಬ್ದಾರಿ ವಹಿಸಿದ್ದರಿಂದ ವಿ.ಎಸ್.ಉಗ್ರಪ್ಪ ಅವರ ಅನಾಯಾಸವಾಗಿ ಗೆದ್ದಿದ್ದರು.
ನಂತರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗುಡುಗಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಪರಿಶೀಲನಾ ಸಭೆಗಳಲ್ಲಿ ಭಾಗವಹಿಸಿ ಅಧಿಕಾರಿಗಳಿಗೆ ನೀರಿಳಿಸಿದ್ದರು. ಒಟ್ಟಾರೆ ಸಂಸದರಾಗಿ ಗಮನಸೆಳೆದಿದ್ದರು.
ಬಿಜೆಪಿ ಈ ಉಪ ಚುನಾವಣೆ ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡುಬರಲಿಲ್ಲ. ಕಾರಣ ಕೇವಲ ಆರು ತಿಂಗಳ ಅವಧಿ ಇದ್ದುದರಿಂದ. ಚುನಾವಣೆಯ ಯಾವ ರಣ ತಂತ್ರವನ್ನು ಮಾಡದೆ ಹೀನಾಯ ಸೋಲನ್ನು ಒಪ್ಪಿಕೊಂಡಿತು.
ಉಗ್ರಪ್ಪ ಅವರು ಸಂಸದರಾಗಿ ಗಮನ ಸೆಳೆದರೂ ಆರು ತಿಂಗಳ ನಂತರ ೨೦೧೯ ರಲ್ಲಿ ನಡೆದ ಚುನಾವಣೆಯಲ್ಲಿ ಸೋಲುಕಂಡರು, ಪ್ರಧಾನಿಮೋದಿ ಅಲೆಯಲ್ಲಿ ಮತ್ತೆ ಬಿಜೆಪಿಗೆ ಗೆಲುವು ದೊರಕಿತು.
ಸಂಸದರಾಗಿ ಆಯ್ಕೆಯಾಗಿ ಆರು ತಿಂಗಳ ಸೇವೆ, ನಂತರ ಸ್ಪರ್ಧೆ ಮಾಡಿ ಸೋತರೂ, ಕ್ಷೇತ್ರದ ಸಂಪರ್ಕ ಕಡಿತ ಮಾಡಿಕೊಳ್ಳದೆ, ಆಗಾಗ್ಗೆ ಕ್ಷೇತ್ರದಲ್ಲಿ ಸಂಚರಿಸುತ್ತ, ಇತರೆ ಚುನಾವಣಾ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾ ಬಂದಿರುವ ಉಗ್ರಪ್ಪನವರು. ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿಜಯ ಸಾಧಿಸಿರುವುದರಿಂದ ಮತ್ತಷ್ಟು ಪುಳಕಿತರಾಗಿ ಮತ್ತೆ ೨೦೨೪ ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಲು ಸ್ಪರ್ಧಾಕಾಂಕ್ಷಿಯಾಗಿ ತಯಾರಿ ನಡೆಸಿದ್ದಾರೆ ಎನ್ನಬಹುದು.