ಲೋಕಸಭಾ ಚುನಾವಣೆ:ಕಾಂಗ್ರೆಸ್ ಗ್ಯಾರೆಂಟಿ – ಮೋದಿ ಹವಾ ನಡುವೆ ಸ್ಪರ್ಧೆ


ಎನ್.ವೀರಭದ್ರಗೌಡ
ಬಳ್ಳಾರಿ, ಮೇ.05: ಈ ಲೋಕಸಭಾ ಕ್ಷೇತ್ರದ ಚುನಾವಣೆ ಈ ಹಿಂದೆ ಪಕ್ಷ ಮತ್ತು ಅಭ್ಯರ್ಥಿಗಳ ನಡುವಿನ ಸ್ಪರ್ಧೆಯಾಗಿ ನಡೆದಿದ್ದವು. ಆದರೆ ಈ ಬಾರಿಯ ಚುನಾವಣೆ ನೇರ ಹಣಾಹಣಿಯಲ್ಲಿ ಕಾಂಗ್ರೆಸ್ ನ ಗ್ಯಾರೆಂಟಿ ಮತ್ತು ಬಿಜೆಪಿಯ ಮೋದಿಯವರ ಹವಾದ ಮೇಲೆ ನಡೆದಿದೆ ಎನ್ನಬಹುದು.
ಕಾಂಗ್ರೆಸ್ ನವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೊಟ್ಟ ಭರವಸೆಯಂತೆ ಪಂಚ ಗ್ಯಾರೆಂಟಿಗಳನ್ನು ಈಡೇರಿಸಿದ್ದಾರೆ‌ ಇದರಲ್ಲಿ ಮಹತ್ವದ್ದು ಎಂದರೆ ಗೃಹ ಲಕ್ಷ್ಮಿ ಯೋಜನೆ ಕಳೆದ ಹತ್ತು ತಿಂಗಳಲ್ಲಿ ರಾಜ್ಯದ ಲಕ್ಷಾಂತರ  ಮಹಿಳೆಯರಿಗೆ  ಮಾಸಿಕ ಎರೆಡು ಸಾವಿರ ಅವರ ಅಕೌಂಟಿಗೆ ಬಂದು ಬೀಳುತ್ತಿದೆ.
ಚುನಾವಣೆ ಇರುವುದರಿಂದಲೋ ಏನೋ ನಿನ್ನೆ, ಮೊನ್ನೆ ಈ ಯೋಜನೆಯ ಬಹುತೇಕ ಮಹಿಳೆಯರ ಅಕೌಂಟಿಗೆ ಹಣ ಬಂದು ಜಮೆಯಾಗಿದೆ. ಇದಷ್ಟೇ ಅಲ್ಲದೆ ಅನ್ನ ಭಾಗ್ಯದ ಐದು ಕಿಲೋ ಅಕ್ಕಿಯ ಹಣವೂ ಸಹ ಅಕೌಂಟಿಗೆ ಬಂದಿದೆ.
ಸಾವಿರಾರು ರೂಪಾಯಿ ತಮ್ಮ ಅಕೌಂಟಿನಲ್ಲಿ ಜಮೆ ಆಗುತ್ತಿರುವುದನ್ನು ಕಂಡಿರುವ ಮಹಿಳೆಯರು ಈ ಗ್ಯಾರೆಂಟಿ ನೀಡಿದ ಕಾಂಗ್ರೆಸ್ ಗೆ ತಮ್ಮ ಮತ ಎನ್ನುತ್ತಿದ್ದಾರೆ‌.
ಅಭ್ಯರ್ಥಿ ಯಾರೆಂಬುದು ಇಲ್ಲಿ ಗೌಣವಾಗಿದೆ. ಕಾಂಗ್ರೆದ್ ಪಕ್ಷದ ಮೇಲಿದ್ದ ಈ ಹಿಂದಿನ ಹಗರಣಗಳ ಆರೋಪವೆಲ್ಲ ಈ ಗ್ಯಾರೆಂಟಿ ಮುಂದೆ ಶೂನ್ಯವಾಗಿವೆ. ತಮ್ಮ ಪಕ್ಷ  ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ  ಮಾಸಿಕ ಈ ಎರೆಡು ಸಾವಿರದ ಜೊತೆಗೆ ವಾರ್ಷಿಕ ಒಂದು ಲಕ್ಷರೂ ಮಹಾ ಲಕ್ಷ್ಮಿ ಯೋಜನೆಯಡಿ ಅದು ಸಹ ಅಕೌಂಟಿಗೆ ಬಂದು ಬೀಳುತ್ತೆ ಎಂಬ ಕಾಂಗ್ರೆಸ್ ನವರು ಸಹಿ ಮಾಡಿರುವ ಗ್ಯಾರೆಂಟಿ ಕಾರ್ಡುಗಳು ಮನೆ ಮನೆ ತಲುಪಿದ್ದು ಅವು ಕಾಂಗ್ರೆಸ್ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸತೊಡಗಿವೆ.
ಜೊತೆಗೆ ಕಳೆದ ಎಲ್ಲಾ ಚುನಾವಣೆಯಂತೆ ಅಲ್ಪ ಮೊತ್ತದಲ್ಲಿ ಕತ್ತಲರಾತ್ರಿಯ ಹಂಚಿಕೆಯೂ ಇದೆ ಎನ್ನಲಾಗುತ್ತಿದೆ.
ಈ ಗ್ಯಾರೆಂಟಿಗಳು, ಮುಂದೆ ಗ್ಯಾರೆಂಟಿ ಇಲ್ಲ ಎಂಬ ಪುರಷರ ಮಾತನ್ನು ದಿಕ್ಕರಿಸಿ ಮಹಿಳೆಯರು ಕಾಂಗ್ರೆಸ್ಸಿಗೇ..ನಮ್ಮ ಮತ ಎನ್ನತೊಡಗಿದ್ದಾರೆ.  ಇದು ಕಾಂಗ್ರೆದ್ ಅಭ್ಯರ್ಥಿ ತುಕರಾಂ ಅವರ ಗೆಲುವಿಗೆ ಸಹಕಾರಿ ಎಂದರೆ ತಪ್ಪಾಗಲಾರದು.
ಜೊತೆಗೆ ತನ್ನ ಶಿಷ್ಯನನ್ನು ದೆಹಲಿಗೆ ಕಳಿಸಲು ಟೊಂಕ ಕಟ್ಟಿಕೊಂಡು ಚುನಾವಣೆಗೆ ನುಗ್ಗಿರುವ ಸಚಿವ ಸಂತೋಷ್ ಲಾಡ್, ತಮ್ಮ ಜಿಲ್ಲಾ ಉಸ್ತುವಾರಿ ಸ್ಥಾನ ಉಳಿಸಿಕೊಳ್ಳಲು ಬಿ.ನಾಗೇಂದ್ರ, ಜಮೀರ್ ಅಹಮ್ಮದ್, ಮುಂದಿನ ದಿನಗಳಲ್ಲಿ ಸರ್ಕಾರದಿಂದ ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಲು, ಶಾಸಕರೂ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಮೇಲ್ನೋಟಕ್ಕಂತೂ ಭಿನ್ನಾಭಿಪ್ರಾಯವಿಲ್ಲದೇ ಒಗ್ಗಟ್ಟಿನ ಮಂತ್ರದಲ್ಲಿ ಮತಯಾಚನೆ ನಡೆದಿದೆ.
ಜೊತೆಗೆ ಸಾಂಪ್ರದಾಯಿಕವಾಗಿ ಪರಿಶಿಷ್ಟಜಾತಿ, ಸಿದ್ದರಾಮಯ್ಯ ನಮ್ಮ‌ಮುಖ್ಯ ಮಂತ್ರಿ ಎಂದು ಕುರುಬರು, ಅಲ್ಲದೆ ಮೋದಿ ವಿರೋದಿಗಳಾಗಿರುವ ಅಲ್ಪಸಂಖ್ಯಾತರೆನ್ನುವ ಮುಸ್ಲಿಂ ಮತಗಳ ಕ್ರೂಡಿಕರಣ  
ಕಾಂಗ್ರೆಸ್ ಗೆ ನೆರವಾಗಬಲ್ಲದು.
ನಾಲ್ಕು ಬಾರಿ ಶಾಸಕರಾಗಿ ಒಂದಿಷ್ಟು ಉತ್ತಮ ಶಾಸಕರಂತೆ ಅಭಿವೃದ್ಧಿ ಮಂತ್ರ ಪಠಿಸುತ್ತ  ಕ್ಷೇತ್ರದಲ್ಲಿ ಕೆಲಸ ಮಾಡಿ ಗಮನ ಸೆಳೆದಿರುವ ತುಕರಾಂ ಅವರ ವ್ಯಕ್ತಿತ್ವಕ್ಕೂ ಮತ ಬೀಳುವ ಸಾಧ್ಯತೆ ಇದೆ.
ಕಳೆದ 2018 ರ ಉಪ ಚುನಾವಣೆ ಮತ್ತು 2019 ರ ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ ಕ್ಷೇತ್ರದ ಬಳ್ಳಾರಿ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳು ಕಾಂಗ್ರೆಸ್ ಗೆ ಲೀಡ್ ನೀಡುತ್ತಾ ಬಂದಿವೆ. ಇದು ಈ ಬಾರಿಯೂ ಮರುಕಳಿಸುವ ಸಾಧ್ಯತೆ ಕಂಡು ಬರುತ್ತಿದೆ.
ಇನ್ನು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿದ್ದು, ಶಾಸಕರು, ಸಚಿವರು, ಸಂಸದರಾಗಿ ರಾಜ್ಯಕ್ಕೇ ಪರಿಚಯವಿರುವ ವ್ಯಕ್ತಿಯಾಗಿದ್ದರೂ. ಈ ಚುನಾವಣೆಯಲ್ಲಿ ಅವರ ವ್ಯಕ್ತಿತ್ವಕ್ಕಿಂತ ಪ್ರಧಾನಿ ಮೋದಿ ಅವರ ವ್ಯಕ್ತಿತ್ವ, ಆಡಳಿತದ ಹವಾ ಹೆಚ್ಚು ಪ್ರಭಾವ ಶಾಲಿಯಾಗಿದೆ ಎನ್ನಬಹುದು‌.
ಗ್ಯಾರೆಂಟಿಗಳಿಂದ ಬಿಜೆಪಿಯ ಕಡೆ ಇದ್ದ ಮಹಿಳೆಯರೂ ಕಾಂಗ್ರೆಸ್ ನತ್ತ ಮುಖ ಮಾಡಿರುವುದಕ್ಕೆ ಅವರ ಪುರುಷರು, ಬಿಜೆಪಿಯ ಕಾರ್ಯಕರ್ತರು, ಈ ಗ್ಯಾರೆಂಟಿಗಳು ಲೋಕಸಭಾ ಚುನಾವಣೆ ನಂತರ ನಿಲ್ಲುತ್ತವೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾದಷ್ಟು ಸ್ಥಾನಗಳಲ್ಲೂ ಸ್ಪರ್ಧೆ ಮಾಡಿಲ್ಲ ಎಂದು ಹೇಳಿ ಬಿಜೆಪಿಗೆ ಮತ ನೀಡಲು ಹೇಳುತ್ತಿದ್ದಾರೆ.
ಇದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ದೇಶದ ಅರ್ಥಿಕತೆ, ಭದ್ರತೆ, ವಿಶ್ವದಲ್ಲಿ ಭಾರತದ ಸ್ಥಾನಮಾನ ಕಾಪಾಡಲು ನಡೆಯುವ ಚುನಾವಣೆ, ಹಿಂದುತ್ವದ ಸಂರಕ್ಷಣೆ, ಇದಕ್ಕೆಲ್ಲ ಮೋದಿಯಂತಹ ಪ್ರಧಾನಿ ಮತ್ತೆ ಬೇಕು ಎಂಬ ಮನೋಭಾವದ ಜನತೆ, ಅಲ್ಲದೆ ಸಂಘ ಪರಿವಾರದ ಅಂತರಿಕ ಚಟುವಟಿಕೆಗಳ ಮೂಲಕ ಮತ ಭೇಟೆ, ಜೊತೆಗೆ ಯಡಿಯೂರಪ್ಪ, ವಿಜಯೇಂದ್ರರಿಗೆ ಅಧಿಕಾರ ಮುಂದುವರೆಯಬೇಕೆಂದು ಲಿಂಗಾಯತ ಮತಗಳು, ತುಕರಾಂ ಅವರು ಶಾಸಕರಿದ್ದಾರೆ,  ನಮ್ಮ ಸಮುದಾಯದ ನಾಯಕ  ಶ್ರೀರಾಮುಲುಗೂ ಒಂದು ಸ್ಥಾನ ಇರಲಿ ಎಂಬ ವಾಲ್ಮೀಕಿ ಮತಗಳು, ದೇಶ ಭಕ್ತಿಯ ಜನ, ಜೈನ್, ಆರ್ಯವೈಶ್ಯ ಮೊದಲಾದ ಸಮುದಾಯದ ಮತಗಳು ಬಿಜೆಪಿಯ ಕಮಲ ಅರಳಿಸಬೇಕು ಎನ್ನುವಂತೆ ಕಂಡು ಬರುತ್ತಿದೆ.
ಶ್ರೀರಾಮುಲು ಅವರು ಸಹ ಈ ಚುನಾವಣೆ ನನ್ನ ರಾಜಕೀಯ ಜೀವನದ ಅಳಿವು ಉಳಿವಿನ ಪ್ರಶ್ನೆಯಾಗಿದೆಂದು ಮತದಾರರಲ್ಲಿ ಮನವಿ, ಆಪ್ತನನ್ನು ಗೆಲ್ಲಿಸಲು ಜನಾರ್ಧನ ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದು‌ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಚಿವ ಆನಂದ್ ಸಿಂಗ್ ಮೊದಲಾದವರು ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ‌.ಬಿಜೆಪಿಗೆ ವಿಜಯನಗರ ಜಿಲ್ಲೆ ಒಂದಿಷ್ಟು ಸಹಕಾರಿಯಾಗಲ್ಲದು.
ಒಟ್ಟಾರೆ ಈ ಚುನಾವಣೆ ಕಾಂಗ್ರೆಸ್ ನ ಗ್ಯಾರೆಂಟಿ ಮತ್ತು ಬಿಜೆಪಿಯ ಮೋದಿ ಹವಾದ ಮೇಲೆ ನಿಂತಿದೆ ಎನ್ನಬಹುದು.