ವಿಜಯಪುರ:ಮೇ.29:ನಗರದ ಅಂಬೇಡ್ಕರ್ ವೃತ್ತದಲ್ಲಿ ಎಐಎಮ್‍ಎಸ್‍ಎಸ್, ಎಐಡಿಎಸ್‍ಓ ಎಐಕೆಕೆಎಮ್‍ಎಸ್(ಆರ್ ಕೆ ಎಸ್) ಹಾಗೂ ಎಐಯುಟಿಯುಸಿ ಇನ್ನಿತರ ಪ್ರಗತಿಪರ ಸಂಘಟನೆಗಳ, ನೇತೃತ್ವದಲ್ಲಿ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಕುಸ್ತಿಪಟುಗಳ ಬಂಧಿಸಿರುವುದನ್ನು ಖಂಡಿಸಿ ಹಾಗೂ ಕುಸ್ತಿಟುಗಳ ಹೋರಾಟಕ್ಕೆ ಬೆಂಬಲಿಸಿದ ವಿವಿಧ ಸಂಘಟನೆಗಳ ನಾಯಕರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ನಾಯಕರಾದ ಮೀನಾಕ್ಷಿ ಬಾಳಿಯವರು ಮಾತನಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿದಂತಹ ಬ್ರಿಜ್ ಭೂಷಣ್ ಸಿಂಗ್ ರವರನ್ನು ಈ ಕೂಡಲೇ ಬಂಧಿಸಬೇಕು. ಮಹಿಳೆಯರು ಇಂದು ಹೋರಾಟ ಮಾಡುತ್ತಿರುವುದನ್ನು ಸಹಿಸದೆ ಅವರನ್ನು ಬಂಧಿಸಿದ್ದಾರೆ. ನೀವು ಅವರನ್ನು ಬಂಧಿಸಬಹುದು ಅವರ ವಿಚಾರಗಳನ್ನಲ್ಲ ಎಂದು ಎಂದು ಹೇಳಿದರು.
ಎಐಎಮ್‍ಎಸ್‍ಎಸ್ ರಾಜ್ಯ ನಾಯಕರಾದ ಕಲ್ಯಾಣಿ ಎಂ,ವಿ ಯವರು ಮಾತನಾಡುತ್ತಾ ದೆಹಲಿಯ ಪೋಲೀಸರ ಅಪ್ರಜಾತಾಂತ್ರಿಕ ಹಾಗೂ ದಮನಕಾರಿ ಕ್ರಿಯೆಯನ್ನು ಖಂಡಿಸುತ್ತಾ, ಬಂಧಿಸಿರುವ ಕುಸ್ತಿಪಟುಗಳು ಹಾಗೂ ಅವರಿಗೆ ಬೆಂಬಲಿಸಿದ ರೈತ, ಕಾರ್ಮಿಕ ಹಾಗೂ ಮಹಿಳಾ ನಾಯಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಜೆಎನ್‍ಯು ನಿವೃತ್ತ ಪ್ರಾಧ್ಯಾಪಕರಾದ ಪುರುಷೋತ್ತಮ ಬಿಳಿಮಲೆ ಯವರು ಮಾತನಾಡುತ್ತಾ ಕಳೆದ ಜನವರಿಯಿಂದ ಮಹಿಳಾ ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಕೂಡ ಮಹಿಳೆಯರು ಒಂದಲ್ಲ ಎರಡಲ್ಲ ಎಲ್ಲಾ ಕಡೆಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ನಡೆಯುತ್ತಿದೆ. ಮಹಿಳೆಯರು, ಜನರು ಇದನ್ನು ಒಗ್ಗಟ್ಟಿನಿಂದ ಪ್ರತಿಭಟಿಸಬೇಕು, ನ್ಯಾಯ ಸಿಗುವವರೆಗೆ ಈ ಹೋರಾಟವನ್ನು ಎಲ್ಲರೂ ಮುಂದುವರೆಸಬೇಕು ಎಂದು ಹೇಳಿದರು.
ಎಐಯುಟಿಯುಸಿ ಯ ರಾಜ್ಯ ಉಪಾಧ್ಯಕ್ಷರು ಹಾಗೂ ಜೆಸಿಟಿಯು (ಜಂಟಿ ಕಾರ್ಮಿಕ ಸಂಘಟನೆಯ) ರಾಜ್ಯ ಸಂಚಾಲಕರಾದ ಕೆ.ವಿ ಭಟ್ ಅವರು ಮಾತನಾಡುತ್ತಾ ಕಳೆದ ಒಂದು ತಿಂಗಳಿಂದ ದೇಶದ ಹೆಸರಾಂತ ಕುಸ್ತಿಪಟುಗಳು ಭಾರತೀಯ ಕುಸ್ತಪಟುಗಳ ಫೆಡರೇಷನ್ ನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹಾಗೂ ತರಬೇತುದಾರರಿಂದ ನಡೆದ ದೌರ್ಜನ್ಯ ವನ್ನು ಖಂಡಿಸಿ ಹೋರಾಟ ಮಾಡುತ್ತಿದ್ದ ರೈತ ಮಹಿಳಾ ಕಾರ್ಮಿಕ ನಾಯಕರನ್ನು ಬಂಧಿಸಿರುವುದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಈ ಕೂಡಲೇ ಅಪರಾಧಿಗೆ ಶಿಕ್ಷೆ ಆಗಬೇಕು. ಬಂಧನಕ್ಕೊಳಗಾದ ಕುಸ್ತಿಪಟುಗಳು ಹಾಗೂ ರೈತ,ಮಹಿಳಾ, ಕಾರ್ಮಿಕ ನಾಯಕರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಸಾಹಿತಿ ಸಬಿತಾ ಬನ್ನಾಡಿ ಯವರು ಮಾತನಾಡುತ್ತಾ ಮಹಿಳೆಯರ ಮೇಲೆ ಈ ರೀತಿ ಮಾಡಿರುವಂತದ್ದು ಅಮಾನವೀಯವಾದದ್ದು, ದೊಡ್ಡ ದೊಡ್ಡ ಭಾಷಣ ಮಾಡುವ ಇವರು ಮಹಿಳೆಯರ ಯಾವ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ. ದೇಶಕ್ಕಾಗಿ ಹೋರಾಡಿ ಚಿನ್ನದ ಪದಕ ತಂದುಕೊಟ್ಟಂತಹ ಇಂತಹ ಹೆಣ್ಣುಮಕ್ಕಳ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿಯೇನು? ಇದರ ಬಗ್ಗೆ ನಾವು ಚಿಂತೆ ಮಾಡಬೇಕಿದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಜನಶಕ್ತಿ ಸಂಘಟನೆಯ ಮಲ್ಲಿಗೆ ಸಿರಿಮನೆ, ಪ್ರಗತಿಪರ ಚಿಂತಕ ವಾಣಿ ಪೆರಿಯೋಡಿ ಯವರು ಮಾತನಾಡುತ್ತಾ ಬೇಟಿ ಪಡಾವೋ ಬೇಟಿ ಬಚಾವೋ ಎಲ್ಲಿದೆ. ಮಹಿಳೆಯರಿಗೆ ರಕ್ಷಣೆ ಕೊಡದ ಸರ್ಕಾರ ಮಹಿಳೆಯರಿಗೆ ಏನು ಕೊಡಲು ಸಾಧ್ಯ ಎಂದು ಹೇಳಿದರು.
ಈ ಪ್ರತಿಭಟನಯಲ್ಲಿ ಆರ್‍ಕೆಸ್‍ನ ರಾಜ್ಯ ಉಪಾಧ್ಯಕ್ಷರಾದ ಭಿ.ಭಗವಾನ್ ರೆಡ್ಡಿಯವರು, ಎಐಯುಟಿಯುಸಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಹೆಚ್ ಟಿ ಅವರು, ಎಐಎಮ್‍ಎಸ್‍ಎಸ್ ನ ಜಿಲ್ಲಾ ಸಂಚಾಲಕರಾದ ಶಿವಬಾಳಮ್ಮ ಕೊಂಡುಗೂಳಿಯವರು, ಸಹಸಂಚಾಲಕರಾದ ಗೀತಾ ಹೆಚ್ ಅವರು, ಎಐಡಿಎಸ್ ಓ ಜಿಲ್ಲಾ ಅಧ್ಯಕ್ಷರಾದ ಸುರೇಖ ಕಡಪಟ್ಟಿ, ಕಾರ್ಯದರ್ಶಿಯಾದ ಕಾವೇರಿ ರಜಪೂತ, ಜಿಲ್ಲಾ ಉಪಾಧ್ಯಕ್ಷರಾದ ದೀಪಾ ವಡ್ಡರ್, ಹಿರಿಯ ಹೋರಾಟಗಾರರಾದ ಭೀಮಶಿ ಕಲಾದಗಿ ಯವರು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ನಾಯಕರಾದ ಸುರೇಖಾ ರಜಪೂತ ರವರು, ನಜ್ಮಾ ಭಾಂಗಿ, ಫಾದರ್ ಟಿಯೋಲ, ಅಕ್ರಮ್ ಮಾಶಳ್‍ಕರ್ ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಯ ಮುಖಂಡರು, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ, ಮಲ್ಲಮ್ಮ ಯಳವಾರ, ವಿದ್ಯಾವತಿ ಅಂಕಲಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.