ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಗೆ ಬಂಧನಕ್ಕ ಆಗ್ರಹಿಸಿ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.19: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗನನ್ನು ಬಂಧಿಸಬೇಕು ಎಂದು ಆಗ್ರಹಿಸಿ.ಅಖಿಲ ಭಾರತ ಪ್ರತಿಭಟನಾ ದಿನದ  ಭಾಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ವಕೀಲರು ಹಾಗೂ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಂಚಾಲಕರಾದ ಆರ್.ಸೋಮಶೇಖರ್ ಗೌಡ ಮಾತನಾಡುತ್ತಾ “ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಕುಸ್ತಿಪಟುಗಳ ಹೋರಾಟ ಇಂದಿಗೆ ಮೂರನೇ ವಾರಕ್ಕೆ ಕಾಲಿಟ್ಟಿದೆ. ಒಲಿಂಪಿಕ್ ಕೂಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಆರಿಸಿದ ಭಾರತದ ಕುಸ್ತಿಪಟುಗಳು ಇಂದು ಬೀದಿಗೆ ಇಳಿದಿದ್ದಾರೆ. ಕುಸ್ತಿ ಫೆಡರೇಶನ್ ಅಧ್ಯಕ್ಷ ಹಾಗೂ ಆಡಳಿತರೂಢ ಬಿಜೆಪಿಯ ಸಂಸದನಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಕೆಲವು ಕೋಚ್ ಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರನ್ನು ಈ ಕೂಡಲೇ ಬಂದಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅಷ್ಟಕ್ಕೂ ಈ ಕುಸ್ತಿಪಟುಗಳು ಧರಣಿ ಕುಳಿತಿರುವುದು ಇದೇ ಮೊದಲೇನಲ್ಲ.ಜನೇವರಿ ತಿಂಗಳಲ್ಲಿ ಒಲಿಂಪಿಕ್ ಕುಸ್ತಿಪಟುಗಳಾದ ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್,ಬಜರಂಗ್ ಪೂನಿಯಾ ಸೇರಿದಂತೆ ಹಲವಾರು ಜನ ಕುಸ್ತಿಪಟುಗಳು ಮೂರು ದಿನಗಳ ಕಾಲ ಅಹೋ ರಾತ್ರಿ ಧರಣಿ ನಡೆಸಿದರು. ಆಗ ಪ್ರಕರಣಗಳ ತನಿಖೆಗೆ ಕೇಂದ್ರ ಸರ್ಕಾರವು ಒಲಿಂಪಿಯನ್ ಬಾಕ್ಸಿಂಗ್ ಪಟು ಮೇರಿ ಕೋಮ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅಲ್ಲದೆ ಆರೋಪಿ ಬ್ರಿಜ್  ಭೂಷಣ್ ನನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿಯೂ ಹೇಳಿತ್ತು.ಆದರೆ ದುರಂತವೆಂದರೆ ಮೇರಿ ಕೋಮ್ ನೀಡಿದ ವರದಿಯನ್ನು ಕ್ರೀಡಾ ಇಲಾಖೆ ಇಲ್ಲಿಯವರೆಗೂ ಕೂಡ ಬಹಿರಂಗಪಡಿಸಿಲ್ಲ. ಇದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗೆಯೇ ಕೇಂದ್ರ ಸರ್ಕಾರವು ಕೂಡ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ.ಈ ವೈಫಲ್ಯ ಹಾಗೂ ನಿರ್ಲಕ್ಷ್ಯದ ಧೋರಣೆಯ ವಿರುದ್ಧ ಕುಸ್ತಿಪಟುಗಳು ಮತ್ತೆ ಬೀದಿಗಿಳಿಯುವಂತಾಗಿದೆ ಎಂದಿದ್ದಾರೆ.
ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಬ್ರಿಜ್ ಭೂಷಣನ್ನು ಬಂಧಿಸಬೇಕು, ನಿಷ್ಪಕ್ಷಪಾತ ತನಿಖೆ ನಡೆಸಿ ನಿದರ್ಶನೀಯ ಶಿಕ್ಷೆ ನೀಡಬೇಕು ಜೊತೆಗೆ ರಕ್ಷಣೆ ಹಾಗೂ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಇಂತಹ ಕೆಟ್ಟ ಪರಿಸ್ಥಿತಿಯ ವಿರುದ್ಧ ಹೆಣ್ಣು ಮಕ್ಕಳು ಒಂದುಗೂಡಿ ಹೋರಾಟಗಳನ್ನು ಕಟ್ಟಬೇಕು” ಎಂದು ಕರೆ ನೀಡಿದರು.
ಎ ಐ ಎಂ ಎಸ್ ಎಸ್ ನ ಜಿಲ್ಲಾಧ್ಯಕ್ಷರಾದ ಈಶ್ವರಿ ಅವರು ಮಾತನಾಡುತ್ತಾ ಇದೇ ಮಹಿಳಾ ಕುಸ್ತಿಪಟುಗಳು ವಿದೇಶ ಮಟ್ಟದಲ್ಲಿ ಬಂಗಾರದ ಪದಕಗಳನ್ನು ಗೆದ್ದುಕೊಂಡು ಬಂದಾಗ ಅವರನ್ನು ಫೋನ್ ಕರೆ ಮಾಡಿ ಅಭಿನಂದಿಸಿ ಫೋಟೋಗಳನ್ನು ತೆಗೆಸಿಕೊಳ್ಳುವ ಮೋದಿಯವರು ಇಂದು ಅದೇ ಹೆಣ್ಣು ಮಕ್ಕಳು ನಮಗೆ ನ್ಯಾಯ ಕೊಡಿಸಿ ಎಂದು ಅಹವಾಲು ಇಡುತ್ತಿದ್ದರೂ ಮೋದಿಯವರು ಮೌನಿ ಬಾಬಾ ಆಗಿರುವುದು ತುಂಬಾ ನೋವಿನ ಸಂಗತಿ. ದಸರಾ ಅಂಬಾರಿ ಹೊತ್ತ ಆನೆ ಬಲರಾಮನ ಸಾವಿಗೂ ಮೋದಿಯ ಸಂತಾಪ ಸಿಗುತ್ತದೆ. ಆದರೆ ಈ ಹೆಣ್ಣು ಮಕ್ಕಳ ನೋವಿಗೆ ಸಂತಾಪ ಸಿಗುವುದೆಂದೋ? ಬೇಟಿ ಬಚಾವೋ ಬೇಟಿ ಪಡಾವೋ ಎಂಬುದು ಕೇವಲ ಬಾಯುಪಚಾರಕ್ಕಾಗಿ ಹೇಳುವ ಮಾತು ಎಂಬುದು ಸುಸ್ಪಷ್ಟವಾಗಿ ಅರ್ಥವಾಗುತ್ತಿದೆ ಎಂದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿಗಳಾದ ವಿಜಯಲಕ್ಷ್ಮಿ ವಹಿಸಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪದ್ಮಾ, ವಿದ್ಯಾ, ಗಿರಿಜಾ ಸದಸ್ಯರಾದ ಭಾಗ್ಯ,ಮೀನಾಕ್ಷಿ ,ಸುಧಾ , ಹಲವಾರು ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.