ಬೆಂಗಳೂರು,ಏ.೨೬-ರ್‍ಯಾಪಿಡೊ ಸವಾರನ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸುತ್ತಿದ್ದ ಬೈಕ್‌ನಿಂದ ಹಾರಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಏಪ್ರಿಲ್ ೨೧ ರಂದು ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ರ್‍ಯಾಪಿಡೊ ಬೈಕ್ ಹತ್ತಿದ್ದ ಯುವತಿಗೆ ಕಿರುಕುಳ ನೀಡಲು ಮುಂದಾದ ಸವಾರನ ಕಾಮಚೇಷ್ಟೆಯಿಂದ ತಪ್ಪಿಸಿಕೊಳ್ಳಲು ಯುವತಿ ಬೈಕ್‌ನಿಂದಲೇ ಹಾರಿ ತಪ್ಪಿಸಿಕೊಂಡಿದ್ದು ಆರೋಪಿ ದೀಪಕ್ ರಾವ್‌ನನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇಂದಿರಾನಗರಕ್ಕೆ ಹೊರಟಿದ್ದ ಯುವತಿಯು ರ್‍ಯಾಪಿಡೊ ಬೈಕ್ ಬುಕ್ ಮಾಡಿದ್ದಳು. ಆದರೆ ಆರೋಪಿ ದೀಪಕ್ ರಾವ್ ಆಕೆಯನ್ನು ರಾಜಾನುಕುಂಟೆ ಕಡೆಗೆ ಕರೆದುಕೊಂಡು ಹೊರಟಿದ್ದು, ಲೊಕೇಶನ್ ಚೇಂಜ್ ಆಗುತ್ತಿದ್ದಂತೆ ಅನುಮಾನ ಶುರುವಾಗಿ ಭಯಗೊಂಡಿದ್ದ ಯುವತಿ ಚಲಿಸುತ್ತಿದ್ದ ಬೈಕ್‌ನಿಂದ ರಸ್ತೆಗೆ ಹಾರಿದ್ದಾಳೆ.
ಕಾಲ್ಕಿತ್ತ ಆರೋಪಿ:
ಇನ್ನು ಸಿಟಿ ಟಿವಿಯಲ್ಲಿ ಸೆರೆಯಾದ ದೃಶ್ಯದಂತೆ ಯುವತಿ ಬೈಕ್‌ನಿಂದ ಹಾರುತ್ತಿದ್ದಂತೆ ಆಕೆಯ ಕೈಯಲ್ಲಿದ್ದ ವಸ್ತು ಕೂಡ ರಸ್ತೆಗೆ ಬೀಳುತ್ತದೆ. ಆದರೆ ಹೆಲ್ಮೆಟ್ ಹಾಕಿಕೊಂಡಿದ್ದ ಕಾರಣ ಆಕೆಗೆ ಪ್ರಾಣಪಾಯವಾಗಿಲ್ಲ ಎಂದು ಕಂಡುಬಂದಿದೆ.
ರಸ್ತೆಗೆ ಬಿದ್ದ ಯುವತಿ ಬಳಿಕ ತನ್ನ ಜೀವ ಉಳಿಸಿಕೊಳ್ಳಲು ಓಡುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.